ADVERTISEMENT

ಕಾಗಿಣಾ ನದಿಯ ಪ್ರವಾಹ: ಸೇತುವೆ ಮುಳುಗಿ ರಾತ್ರಿ ಸಂಚಾರ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 5:03 IST
Last Updated 27 ಜುಲೈ 2022, 5:03 IST
   

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಮಂಗಳವಾರ ರಾತ್ರಿ ಪ್ರವಾಹ ಉಕ್ಕಿ ಬಂದು ದಂಡೋತಿ ಹತ್ತಿರದ ಸೇತುವೆ ಮುಳುಗಿ ಸಾರಿಗೆ ಸಂಚಾರ ಸ್ತಬ್ಧವಾಗಿತ್ತು.

ಮಂಗಳವಾರ ಸಾಯಂಕಾಲ ನದಿಯಲ್ಲಿ ಪ್ರವಾಹ ಏರುಮುಖವಾಗಿ ಹೆಚ್ಚುತ್ತಾ ರಾತ್ರಿ ಪ್ರವಾಹದ ನೀರಲ್ಲಿ ಸೇತುವೆ ಮುಳುಗಿ ರಾತ್ರಿಯಿಡೀ ಈ ಮಾರ್ಗದ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಚಿತ್ತಾಪುರದಿಂದ ದಂಡೋತಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಶಹಾಬಾದ್ ಮಾರ್ಗವಾಗಿ ಸಂಚರಿಸಿದವು. ದಂಡೋತಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೋಗಬೇಕಾದ ಜನರು ಭಾಗೋಡಿ ಸೇತುವೆಯ ಮೂಲಕ ತೆರಳಿದರು.
ದಂಡೋತಿ ಗ್ರಾಮದಿಂದ ನದಿಯತ್ತ ಯಾರೂ ಹೋಗಬಾರದೆಂದು ಮಾಡಬೂಳ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು.

ADVERTISEMENT

ಕಾಗಿಣಾ ನದಿಯ ಮೇಲ್ಭಾಗ ಸೇಡಂ,ಚಿಂಚೋಳಿ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಸುರಿದು ಹಾಗೂ ಜಲಾಶಯಗಳಿಂದ ನೀರು ಹೊರಕ್ಕೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೆರೆಯ ರಾಜ್ಯ ತೆಲಂಗಾಣದಲ್ಲಿಯೂ ಹೆಚ್ಚು ಮಳೆಯಾಗಿ ಕಾಗಿಣಾ ನದಿ ಪ್ರವಾಹದಿಂದ ತುಂಬಿ ಭೋರ್ಗರೆಯುತ್ತಾ ಹರಿಯುತ್ತಿದೆ.

ಬುಧವಾರ ಬೆಳಗಿನ ಜಾವ ನದಿಯಲ್ಲಿನ ಪ್ರವಾಹ ಇಳಿಮುಖವಾಗಿ ಬೆಳಗ್ಗೆ ದಂಡೋತಿ ಹತ್ತಿರದ ಕಾಗಿಣಾ ನದಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ (ಕೆ), ಇಂಗಳಗಿ ಗ್ರಾಮಗಳ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆಗಳು ಪ್ರವಾಹದಲ್ಲಿ ಮುಳುಗಿ ರಾತ್ರಿ ಸಂಚಾರ ಬಂದ್ ಆಗಿತ್ತು.

ಸೇಡಂ ತಾಲ್ಲೂಕಿನ ಮಳಖೇಡ ಸೇತುವೆಯೂ ಮುಳುಗಡೆಯಾಗಿದ್ದರಿಂದ ಕಲಬುರಗಿಯಿಂದ ಸೇಡಂ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುವ ಕಾರು, ಜೀಪು ಹಾಗೂ ಇತರೆ ಸಣ್ಣ ಗೂಡ್ಸ್ ವಾಹನಗಳು ಗುಂಡಗುರ್ತಿಯಿಂದ ಭಾಗೋಡಿ, ಮುಡಬೂಳ ಗ್ರಾಮದಿಂದ ಮಳಖೇಡ ಮಾರ್ಗವಾಗಿ ಸಂಚರಿಸಿದವು.

ನದಿ ತುಂಬಿ ಹರಿದ ಪರಿಣಾಮ ಸೇತುವೆ ಮುಳಗಿದ್ದರಿಂದ ಜನರು ನದಿಯತ್ತ ಹೋಗದಂತೆ ಮಾಡಬೂಳ ಠಾಣೆಯ ಪೊಲೀಸರು ರಾತ್ರಿ ಕಟ್ಟೆಚ್ಚರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.