ADVERTISEMENT

ಕಲಬುರ್ಗಿ: ಸದ್ಯಕ್ಕೆ ಪ್ರವಾಹದ ಆತಂಕ ಇಲ್ಲ

ಮಹಾರಾಷ್ಟ್ರದ ವೀರ್‌ ಜಲಾಶಯ ಶೇ 80ರಷ್ಟು ಭರ್ತಿ, ಉಜಿನಿ ಶೇ 80ರಷ್ಟು ಖಾಲಿ

ಸಂತೋಷ ಈ.ಚಿನಗುಡಿ
Published 7 ಆಗಸ್ಟ್ 2020, 19:31 IST
Last Updated 7 ಆಗಸ್ಟ್ 2020, 19:31 IST
ಪ್ರವಾಹ- ಸಾಂಕೇತಿಕ ಚಿತ್ರ
ಪ್ರವಾಹ- ಸಾಂಕೇತಿಕ ಚಿತ್ರ   

ಕಲಬುರ್ಗಿ: ಮಹಾರಾಷ್ಟ್ರದ ಉಜಿನಿ ಹಾಗೂ ವೀರ್‌ ಜಲಾಶಯಗಳು ಇನ್ನೂ ಭರ್ತಿ ಆಗಿಲ್ಲ. ಅಂದಾಜು ನಾಲ್ಕು ದಿನಗಳವರೆಗೆ ನೀರು ಹರಿಸುವ ಸಾಧ್ಯತೆ ಇಲ್ಲ. ಹಿಗಾಗಿ, ಸದ್ಯಕ್ಕೆ ಜಿಲ್ಲೆಗೆ ಪ್ರವಾಹ ‍ಪರಿಸ್ಥಿತಿಯ ಭಯ ಇಲ್ಲ ಎಂದು ನೀರಾವರಿ ಇಲಾಖೆಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ಆಗಸ್ಟ್‌ 8ರಂದು 1.75 ಲಕ್ಷ ಕ್ಯುಸೆಕ್‌, ಆ. 9ರಂದು 1.77 ಲಕ್ಷ ಕ್ಯುಸೆಕ್‌ ಹಾಗೂ ಆ. 10ರಂದು 1.85 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಅಂದರೆ, ಈ ಸಮಯಕ್ಕೆ ಸರಿಯಾಗಿ ವರ್ಷದ ಹಿಂದೆ ಪ್ರವಾಹ ಬಂದು ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿ ನೂರಾರು ಮನೆಗಳು ಹಾನಿ ಅನುಭವಿಸಿದ್ದವು. ಸಾವಿರಾರು ಎಕರೆ ಬೆಳೆ ನಾಶವಾಗಿತ್ತು.

ಆದರೆ, ಈ ವರ್ಷ ಮಹಾರಾಷ್ಟ್ರದಲ್ಲೇ ಮಳೆಯ ಪ್ರಮಾಣ ಕಡಿಮೆ ಇದ್ದ ಕಾರಣ ಉಜಿನಿ ಜಲಾಶಯ ಕೇವಲ ಶೇ 20ರಷ್ಟು ಮಾತ್ರ ಭರ್ತಿ ಆಗಿದೆ. ಚಿಕ್ಕದಾದ (9 ಗೇಟ್‌) ವೀರ್‌ ಜಲಾಶಯ ಶೇ 80ರಷ್ಟು ತುಂಬಿದೆ. ಈ ಅಣೆಕಟ್ಟೆಗಳ ಜಲಾನಯನ ‍ಪ್ರದೇಶದಲ್ಲಿ ಮಳೆ ತಗ್ಗಿದೆ. ಹೀಗಾಗಿ, ನದಿಯ ಒಳಹರಿವು ಕೂಡ ಕಡಿಮೆ ಆಗಿದೆ. ಇನ್ನೂ 2 ಮೀಟರ್‌ನಷ್ಟು ನೀರು ಬಂದರೆ ಮಾತ್ರ ಶೇ 90ರಷ್ಟು ಭರ್ತಿ ಆಗುತ್ತದೆ ಎಂಬುದು ಅಣೆಕಟ್ಟೆಯ ಮೂಲಗಳ ಮಾಹಿತಿ.

ADVERTISEMENT

ವೀರ್‌ ಜಲಾಶಯ ಮೂರು ದಿನಗಳಲ್ಲಿ ಭರ್ತಿ ಆದರೂ ಹೆಚ್ಚಿನ ಪ್ರಮಾಣದ ನೀರು ಹರಿಯುವುದಿಲ್ಲ. ಅಣೆಕಟ್ಟೆಗೆ ಬರುವ ಒಳಹರಿವಿನಷ್ಟೇ ಹೊರ ಹರಿವು ಕೂಡ ಇರುತ್ತದೆ. ಜತೆಗೆ, ಅಲ್ಲಿಂದ ನೀರು ಬಿಟ್ಟ ನಂತರ ಜಿಲ್ಲೆಯ ಗಡಿ ತಲುಪಬೇಕಾದರೆ ಕನಿಷ್ಠ 40ರಿಂದ ಗರಿಷ್ಠ 45 ತಾಸು ಸಮಯ ಬೇಕು.‌

ಉಜಿನಿಯು 43 ಗೇಟ್‌ ಹೊಂದಿದ ಬೃಹತ್ ಜಲಾಶಯ. ಇದರ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಮಳೆ ಆರ್ಭಟ ತಗ್ಗಿದೆ. ಒಳಹರಿವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇನ್ನೂ ಶೇ 80ರಷ್ಟು ಭರ್ತಿ ಆಗಬೇಕಾಗಿದೆ. ಜಲಾಶಯದ ಎಫ್‌.ಆರ್. (ಫುಲ್‌ ರಿಸರ್ವ್ಡ್‌) ಲೇವಲ್‌ 2 ಮೀಟರ್‌ ಬರುವವರೆಗೂ ನೀರು ಬಿಡುವುದಿಲ್ಲ. ನೀರು ಬಿಟ್ಟ ಬಳಿಕವೂ ಅದು ಜಿಲ್ಲೆ ಪ್ರವೇಶಿಸಲು ಕನಿಷ್ಠ 36 ತಾಸು ಹಿಡಿಯುತ್ತದೆ.

ಜಿಲ್ಲೆಯ ಸದ್ಯದ ಸ್ಥಿತಿಗತಿ ಏನು?

ಭೀಮಾ ನದಿ ತೀರಕ್ಕೆ ಬರುವ ಜೇವರ್ಗಿ ತಾಲ್ಲೂಕಿನ 38 ಹಾಗೂ ಅಫಜಲಪುರ ತಾಲ್ಲೂಕಿನ 40 ಹಳ್ಳಿಗಳು ‘ಮಹಾನೀರಿನಿಂದಾಗಿಯೇ’ ಪ್ರತಿ ಬಾರಿ ಪ್ರವಾಹ ಎದುರಿಸುತ್ತವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಸುರಿದ ಮುಂಗಾರಿನಿಂದ ಸೊನ್ನ ಬ್ಯಾರೇಜ್‌ನಲ್ಲಿ ನೀರು ಭರ್ತಿಯಾಗುತ್ತಿದ್ದು, ಪ್ರತಿ ದಿನ 1700 ಕ್ಯುಸೆಕ್‌ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ನದಿ ಹರಿವಿನಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡುಬಂದಿಲ್ಲ.

ಅಫಜಲಪುರ ತಾಲ್ಲೂಕಿನ ಬಳುಂಡಗಿ, ಅಳ್ಳಗಿ–ಬಿ, ಅಳ್ಳಗಿ–ಕೆ, ಮಂಗಳೂರು, ದುದ್ದಣಗಿ, ಬಂಕಲಗಾ, ಹಿರಿಯಾಳು ಗ್ರಾಮಗಳು ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬ್ಯಾಡಗಿಹಾಳ, ಮದ್ನಳ್ಳಿ ಮತ್ತು ಇಂಡಿ ತಾಲ್ಲೂಕಿನ ತಾರಾಪುರ– ತಾವರಗೇರ ಸೇರಿ ಒಟ್ಟು 11 ಹಳ್ಳಿಗಳು ಪ್ರತಿ ವರ್ಷ ಭೀಮಾ ಪ್ರವಾಹದಲ್ಲಿ ಮುಳುಗುತ್ತವೆ.

ಕಾರಣ, ಈಗಾಗಲೇ ಇವುಗಳನ್ನು ಸ್ಥಳಾಂತರಿಸಲಾಗಿದೆ. ಆದರೂ ಹಳ್ಳಿಗಳ ಅರ್ಧದಷ್ಟು ಜನ ಅಲ್ಲೇ ವಾಸವಾಗಿದ್ದಾರೆ. ಪ್ರವಾಹದಿಂದ ಆಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಇಲಾಖೆಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ಗ್ರಾಮಸ್ಥರು ಜಾಗ ಬಿಟ್ಟು ತೆರಳಿಲ್ಲ. ಹೀಗಾಗಿ, ಪ್ರವಾಹ ಬಂದರೆ, ಮತ್ತೆ ಈ ಗ್ರಾಮಗಳೇ ಅಪಾಯಕ್ಕೆ ಸಿಲುಕಲಿವೆ ಎನ್ನುವುದು ಅಧಿಕಾರಿಗಳ ಮಾಹಿತಿ.

ಕಳೆದ ಬಾರಿ ₹ 31.40 ಕೋಟಿ ಹಾನಿ

ಕಳೆದ ವರ್ಷ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ₹ 31.40 ಕೋಟಿ ಮೌಲ್ಯದಷ್ಟು ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿತ್ತು.

ಅಫಜಲಪುರ, ಕಲಬುರ್ಗಿ, ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿ ಪ್ರವಾಹದಿಂದಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿ ಅಸ್ತಿ ಹಾನಿ ಸಂಭವಿಸಿತ್ತು. ‌ಇದರಲ್ಲಿ ₹ 16.42 ಕೋಟಿಯಷ್ಟು ಬೆಳೆ ಹಾನಿ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.