ಕಲಬುರಗಿ: ಅತಿವೃಷ್ಟಿ ಹಾಗೂ ಪ್ರವಾಹದಂತಹ ಆಕಸ್ಮಿಕಗಳು ಸಂಭವಿಸಿದ ಸಂದರ್ಭಗಳಲ್ಲಿ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಿ, ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ತಾತ್ಕಾಲಿಕ ವಸತಿ, ಆಹಾರ ಸರಬರಾಜು ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶೇ 69ರಷ್ಟು ಹಾಗೂ ಸೆಪ್ಟೆಂಬರ್ ತಿಂಗಳ ಮೊದಲ 28 ದಿನಗಳಲ್ಲಿ ಶೇ 72ರಷ್ಟು ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಿಂದ ಆಗಿರುವ ಪರಿಣಾಮಗಳು ಹಾಗೂ ಅವುಗಳನ್ನು ಸಮರ್ಪಕವಾಗಿ ಎದುರಿಸುವ ಸಂಬಂಧ ಕಲುಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲೆ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಸೂಚನೆಗಳು ನೀಡಿರುತ್ತಾರೆ.
ನದಿ, ಹಳ್ಳ, ಕೆರೆ ದಡದಲ್ಲಿರುವ ಗುಡಿ, ಮಸೀದಿ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ಬಾಗಿನ ಸಲ್ಲಿಸುವವರನ್ನು ಮನವೊಲಿಸಿ ನದಿ, ಹಳ್ಳ, ಕೆರೆ ದಡದಲ್ಲಿ ತೆರಳದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು.
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಶಾಲೆಗಳು ಹಾಗೂ ಇತರೆ ಕಟ್ಟಡಗಳ ಗೋಡೆಗಳು ಕುಸಿಯುವ ಸಾಧ್ಯತೆ ಇರುವುದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಕ್ರಮವಹಿಸುವುದು. ನದಿ ತೀರದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಪಾಯವಿರುವ ನದಿ, ಹಳ್ಳಗಳಲ್ಲಿ ಈಜಾಡುವುದು ಮತ್ತು ಪೋಟೊ, ಸೆಲ್ಫಿಗಳನ್ನು ತೆಗೆಯದಂತೆ ಸೂಚಿಸಬೇಕು ಎಂದಿದ್ದಾರೆ.
ಜಿಲ್ಲಾ ತಾಲ್ಲೂಕು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಪ್ರವಾಹ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು.ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಭೀಮಾನದಿಗೆ 1.84 ಲಕ್ಷ ಕ್ಯೂಸೆಕ್ ನೀರು ಮಹಾರಾಷ್ಟ್ರ ರಾಜ್ಯದ ಉಜನಿ ಮತ್ತು ಸೀನಾ ಜಲಾಶಯದಿಂದ ಭೀಮಾ ನದಿಗೆ 1.84 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಅಫಜಲಪುರ ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜಿಗೆ ಸೋಮವಾರ ಬಂದು ತಲುಪುತ್ತದೆ. ಈಗಾಗಲೇ ಸೊನ್ನ ಬ್ಯಾರೇಜ್‌ನಿಂದ 2.80 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಉಜನಿ ಮತ್ತು ಸೀನಾ ಜಲಾಶಯದ ನೀರು ಬಂದ ನಂತರ ಸೊನ್ನ ಬ್ಯಾರೇಜಿನಿಂದ ಇನ್ನೂ ಹೆಚ್ಚಿನ ಗೇಟ್‌ಗಳ ಮೂಲಕ ಭೀಮಾ ನದಿಗೆ ನೀರು ಹರಿಬಿಡಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
54 ಕಾಳಜಿ ಕೇಂದ್ರಗಳು ಆರಂಭ ಈಗಾಲೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಒಟ್ಟು 88 ಗ್ರಾಮಗಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದ್ದು ಒಟ್ಟು 54 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಹಾಗೂ ಈ ಕೇಂದ್ರಗಳಿಗೆ ಒಟ್ಟು 6664 ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಹಾಗೂ ರಕ್ಷಣಾ ಸಿಬ್ಬಂದಿಗಳಿಂದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲು 20 ಅಧಿಕಾರಿಗಳನ್ನು ಒಳಗೊಂಡ ಪರಿಣಿತ 1 ಎನ್‌ಡಿಆರ್‌ಎಫ್ ತಂಡವನ್ನು ವಾಡಿ ಗ್ರಾಮದಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.