ADVERTISEMENT

ಕಲಬುರ್ಗಿ: ಕಾರ್ಮಿಕರಿಗೆ ಆಹಾರ ಧಾನ್ಯ ತಲುಪಿಸಿದ ಸಂಸದೆ ಶೋಭಾ

ಪ್ರಜಾವಾಣಿ ಫೋನ್‌ ಇನ್‌ನಲ್ಲಿ ಶಾಸಕ ಅಪ್ಪುಗೌಡ ಅವರಿಗೆ ಮನವಿ ಮಾಡಿದ್ದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:46 IST
Last Updated 21 ಏಪ್ರಿಲ್ 2020, 13:46 IST
ಸಂಸದೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಕಲಬುರ್ಗಿ ಜಿಲ್ಲೆಯ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಿಸಿದರು
ಸಂಸದೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಕಲಬುರ್ಗಿ ಜಿಲ್ಲೆಯ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಿಸಿದರು   

ಕಲಬುರ್ಗಿ: ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸಿಲುಕಿರುವ ಕಲಬುರ್ಗಿ ಮೂಲದ ಕಾರ್ಮಿಕರ 50 ಕುಟುಂಬಗಳಿಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ (ಅಪ್ಪುಗೌಡ) ಅವರ ಮನವಿ ಮೇರೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಆಹಾರ ಧಾನ್ಯದ ಕಿಟ್‌ ತಲುಪಿಸಿದ್ದಾರೆ.

ಕಲಬುರ್ಗಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಫೋನ್‌‍ಇನ್‌ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಕಾರ್ಮಿಕ ಅಶೋಕ ಎಂಬುವವರು ಶಾಸಕ ದತ್ತಾತ್ರೇಯ ಪಾಟೀಲ ಅವರಿಗೆ ಕರೆ ಮಾಡಿ ಊಟಕ್ಕೆ ತೊಂದರೆಯಾಗಿದೆ. ಹಾಗಾಗಿ, ಕಲಬುರ್ಗಿಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದರು.

ಆದರೆ, ಲಾಕ್‌ ಡೌನ್‌ ಇರುವುದರಿಂದ ಅಲ್ಲಿಯೇ ಇರುವಂತೆ ಮನವೊಲಿಸಿದ ಶಾಸಕರು, ಮನೆಗೇ ಅಗತ್ಯ ಸಾಮಗ್ರಿಗಳನ್ನು ಕಳಿಸಿಕೊಡುವುದಾಗಿ ಭರವಸೆ ನೀಡಿದ್ದರು. ಫೋನ್‌ ಇನ್‌ ಮುಗಿಯುತ್ತಿದ್ದಂತೆಯೇ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿ ಕಲಬುರ್ಗಿ ಜಿಲ್ಲೆಯ ಕುಟುಂಬಗಳಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು.ಇದ್ದಕ್ಕೆ ಸ್ಪಂದಿಸಿದ ಸಂಸದೆ ತಮ್ಮ ತಂಡದೊಂದಿಗೆ ಸ್ವತಃ ಆ ಸ್ಥಳಕ್ಕೆ ತಾವೇ ಭೇಟಿ ನೀಡಿ ಆ ಕಾರ್ಮಿಕ ಕುಟುಂಬಗಳಿಗೆ ದಿನನಿತ್ಯದ ಸಾಮಾಗ್ರಿ ವಿತರಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ದತ್ತಾತ್ರೇಯ, ‘ಕೊರೊನಾ ಮಹಾಮಾರಿಯಿಂದಾಗಿ ಸಾಕಷ್ಟು ಜನರಿಗೆ ತೊಂದರೆಯಾಗಿರುವುದು ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಗೊತ್ತಾಯಿತು. ಅಂತಹ ಸಮಸ್ಯೆಗೆ ಸಿಲುಕಿದವರ ಫೋನ್‌ ನಂಬರ್‌ಗಳನ್ನು ಪಡೆದುಕೊಂಡು ಬೇರೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ್ದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಬೇರೆ ಊರುಗಳಿಂದ ಕಲಬುರ್ಗಿಗೆ ಔಷಧಿಗಳನ್ನು ತರಿಸಲು ಆಗದ ಬಗ್ಗೆಯೂ ಹಲವರು ಫೋನ್‌ ಮಾಡಿದ್ದರು. ಆ ಔಷಧಿಗಳನ್ನು ನಾವೇ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.