
ಕಲಬುರಗಿ: ಎರಡು ವರ್ಷಗಳ ಹಿಂದೆ ಜಾನುವಾರುಗಳನ್ನು ಅಕ್ಷರಶಃ ಸಾವಿನ ದವಡೆಗೆ ಸಿಲುಕಿಸಿದ್ದ ಕಾಲುಬಾಯಿ ರೋಗ ಸದ್ಯ ಹತೋಟಿಗೆ ಬಂದಿದ್ದು, ಇದಕ್ಕಾಗಿ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸಿದೆ. ಜಿಲ್ಲೆಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ ತಂಡ ಒಟ್ಟು 8 ಹಂತಗಳಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿದೆ.
ಜಿಲ್ಲೆಯಲ್ಲಿ 2025ರ ಡಿಸೆಂಬರ್ 31ರಂದು 8ನೇ ಸುತ್ತಿನ ಕಾಲುಬಾಯಿ ಲಸಿಕಾಕರಣ ಅಭಿಯಾನ ಮುಕ್ತಾಯವಾಗಿದ್ದು, ಶೇ 96ರಷ್ಟು ಗುರಿ ಸಾಧನೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 3,55,653 ಜಾನುವಾರುಗಳಿದ್ದು ಈ ಪೈಕಿ 3,41,136 ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಗರ್ಭಕಟ್ಟಿದ ಮತ್ತು ರೋಗಗ್ರಸ್ತ ರಾಸುಗಳಿಗೆ ಲಸಿಕೆ ನೀಡುವುದಿಲ್ಲ, ಹೀಗಾಗಿ ಸುಮಾರು 14,500 ದನಗಳಿಗೆ ಲಸಿಕೆ ಹಾಕಿಲ್ಲ.
‘ಅಭಿಯಾನದಲ್ಲಿ ವಿವಿಧ ಕಾರಣಗಳಿಂದ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸದ ರೈತರು ಹತ್ತಿರದ ಪಶು ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಾನುವಾರುಗಳ ಸಾವು: ಜಿಲ್ಲೆಯಲ್ಲಿ 2025ರ 7 ತಿಂಗಳುಗಳ ಅವಧಿಯಲ್ಲಿ ವಿವಿಧ ಕಾರಣಗಳಿಂದ 1,093 ರಾಸುಗಳು ಮೃತಪಟ್ಟಿವೆ.
ಈ ಪೈಕಿ ಆಳಂದ ತಾಲ್ಲೂಕಿನಲ್ಲಿ ಕಳೆದ ವರ್ಷದ ಏಳೇ ತಿಂಗಳಲ್ಲಿ ವಿವಿಧ ಕಾರಣಗಳಿಂದ 294 ಜಾನುವಾರುಗಳು ಮೃತಪಟ್ಟಿದ್ದು, ಇದು ಜಿಲ್ಲೆಯಲ್ಲೇ ಅತಿ ಹೆಚ್ಚು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕ್ರಮವಾಗಿ 65, 62 ಅಂದರೆ 127 ರಾಸುಗಳು ಅಸುನೀಗಿವೆ. ಶಹಾಬಾದ್‌ನಲ್ಲಿ ಅತಿ ಕಡಿಮೆ, ಅಂದರೆ 27 ಜಾನುವಾರುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 258 ರಾಸುಗಳು ಸಾವಿಗೀಡಾಗಿವೆ.
ಆಳಂದ ತಾಲ್ಲೂಕಿನಲ್ಲಿ ಹೆಚ್ಚು ಜಾನುವಾರುಗಳು ಮೃತಪಟ್ಟ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಯಲ್ಲಪ್ಪ ಇಂಗಳೆ, ‘ನಮ್ಮ ತಾಲ್ಲೂಕು ಭೌಗೋಳಿಕವಾಗಿ ದೊಡ್ಡದು, ಜಾನುವಾರುಗಳ ಸಂಖ್ಯೆಯೂ ಹೆಚ್ಚಿದೆ. ಕಳೆದ ವರ್ಷ ಅತಿವೃಷ್ಟಿ ಕಾರಣದಿಂದಲೂ ರಾಸುಗಳು ಮೃತಪಟ್ಟಿವೆ; ಈ ಎಲ್ಲ ಕಾರಣಗಳಿಂದ ನಮ್ಮಲ್ಲಿ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ’ ಎಂದು ಹೇಳಿದರು.
20ನೇ ಜಾನುವಾರು ಗಣತಿ ಪ್ರಕಾರ ಆಳಂದ ತಾಲ್ಲೂಕಿನಲ್ಲಿ 53,235 ಆಕಳು, ಎತ್ತು, ಹೋರಿಗಳಿದ್ದರೆ, 15,996 ಎಮ್ಮೆಗಳು ಇವೆ. 5216 ಕುರಿಗಳಿದ್ದರೆ 59,989 ಮೇಕೆ/ಆಡುಗಳಿವೆ.
ಆರು ತಿಂಗಳ ವಯಸ್ಸು ಮೇಲ್ಪಟ್ಟ ರಾಸು ರೋಗದಿಂದ ಮೃತಪಟ್ಟರೆ ಸ್ಥಳೀಯ ಪಶು ವೈದ್ಯಾಧಿಕಾರಿಯ ವರದಿ ಬಳಿಕ ಇಲಾಖೆ ಪರಿಹಾರ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.