ADVERTISEMENT

ಚಿಂಚೋಳಿಗೆ ಅರಣ್ಯ ಕಾಲೇಜು: ಅರಣ್ಯ ಸಚಿವ ಉಮೇಶ ಕತ್ತಿ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:27 IST
Last Updated 28 ಜೂನ್ 2022, 5:27 IST
ಚಿಂಚೋಳಿ ತಾಲ್ಲೂಕು ಪೋಲಕಪಳ್ಳಿಯಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಸಾಲುಮರದ ತಿಮ್ಮಕ್ಕನ ಸಸ್ಯೋದ್ಯಾನವನವನ್ನು ಅರಣ್ಯ ಸಚಿವ ಉಮೇಶ ಕತ್ತಿ ಸೋಮವಾರ ಉದ್ಘಾಟಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ. ಅವಿನಾಶ ಜಾಧವ ಇದ್ದರು
ಚಿಂಚೋಳಿ ತಾಲ್ಲೂಕು ಪೋಲಕಪಳ್ಳಿಯಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಸಾಲುಮರದ ತಿಮ್ಮಕ್ಕನ ಸಸ್ಯೋದ್ಯಾನವನವನ್ನು ಅರಣ್ಯ ಸಚಿವ ಉಮೇಶ ಕತ್ತಿ ಸೋಮವಾರ ಉದ್ಘಾಟಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ. ಅವಿನಾಶ ಜಾಧವ ಇದ್ದರು   

ಚಿಂಚೋಳಿ: ಕಲಬುರಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರಣ್ಯ ಹೊಂದಿರುವ ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಮಂಜೂರಿಗೆ ಕೃಷಿ ಸಚಿವರ ಜತೆಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು ಇಂದು ಇಲ್ಲಿ ಭರವಸೆ ನೀಡಿದರು.

ತಾಲ್ಲೂಕಿನ ಪೋಲಕಪಳ್ಳಿಯಲ್ಲಿ ಪ್ರಾದೇಶಿಕ ಅರಣ್ಯ ವಲಯದಿಂದ ನಿರ್ಮಿಸಿದ ಸಾಲುಮರದ ತಿಮ್ಮಕ್ಕನ ವೃಕ್ಷ ಉದ್ಯಾನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಅರಣ್ಯವಿದ್ದರೆ ಅದರಲ್ಲಿ ಚಿಂಚೋಳಿಯಲ್ಲಿಯೇ 21 ಸಾವಿರ ಹೆಕ್ಟೇರ್ ಕಾಡಿದೆ. ಇದರ ರಕ್ಷಣೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆ ಸೂಕ್ತವಾಗಿದೆ. ಮುಂದಿನ ವರ್ಷದಿಂದ ಇಲ್ಲಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅರಣ್ಯಪ್ರದೇಶ ವಿಸ್ತರಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ADVERTISEMENT

ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಳಿ ಪರಿಸರ ಪ್ರವಾಸಿಗರನ್ನು ಸೆಳೆಯಲು ಜಂಗಲ್ ಲಾಡ್ಜ್ ಮತ್ತು 4 ಕಾಟೇಜು ನಿರ್ಮಾಣಕ್ಕೆ ₹ 2 ಕೋಟಿ ಮಂಜೂರು ಮಾಡಿದ್ದು ಮುಂದಿನ ತಿಂಗಳು ನಾನೇ ಅಲ್ಲಿಗೆ ಬಂದು ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಸಾಲುಮರದ ತಿಮ್ಮಕ್ಕ ನಮಗೆ ಪ್ರೇರಕ ಶಕ್ತಿ. ಮಕ್ಕಳಿಲ್ಲದ ಕೊರಗನ್ನು ಮರಗಳನ್ನು ನೆಟ್ಟು ನಿವಾರಿಸಿಕೊಂಡ ಆ ತಾಯಿಯ ಸೇವಾ ಮನೋಭಾವ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರಿಗೂ ಮರಗಳ ಅವಶ್ಯಕತೆ ಇದೆ. ಹೀಗಾಗಿ ಮರಗಳನ್ನು ಕಡಿಯದೇ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಮುಂದಾಗಬೇಕು’ ಎಂದರು.

ಶಾಸಕ ಅವಿನಾಶ ಜಾಧವ ಮಾತನಾಡಿದರು. ಈ ಸಸ್ಯೋದ್ಯಾನದಲ್ಲಿ ಕಳ್ಳಿವನ ಮತ್ತು ಚಿಟ್ಟೆವನ ನಿರ್ಮಿಸುವ ಚಿಂತನೆಯಿದೆ ಎಂದುಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚೆಪ್ಪನವರ್ ತಿಳಿಸಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರು, ಗ್ರಾ.ಪಂ.ಅಧ್ಯಕ್ಷ ಜಾಕೀರ್ ಪಟೇಲ್, ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಬಾವಿಕಟ್ಟಿ, ಚಂದ್ರಶೇಖರ ಹೇಮಾ, ತಹಶೀಲ್ದಾರ್ ಅಂಜುಮ ತಬಸ್ಸುಮ, ಬಸವೇಶ್ವರ ಹೀರಾ, ಹಂಪಣ್ಣ ವೈಎಲ್, ವೀರಶೆಟ್ಟಿ ರಾಠೋಡ್, ಶಿವಶರಣಪ್ಪ, ಸಿದ್ರಾಮಪ್ಪ ಪಾಟೀಲ ದಂಗಾಪುರ, ಸಂಜೀವಕುಮಾರ ಚವ್ಹಾಣ ಇದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ಸಂಜೀವಕುಮಾರ ಚವ್ಹಾಣ ವಂದಿಸಿದರು. ಇದೇ ವೇಳೆ ಸಚಿವರು ಚಂದ್ರಂಪಳ್ಳಿಯಿಂದ ಗೊಟ್ಟಂಗೊಟ್ಟವರೆಗಿನ ಚಾರಣ ಮಾರ್ಗದ ಮೊಬೈಲ್ ಆ್ಯಪ್ ಮತ್ತು ಚಿಂಚೋಳಿ ಕಾಡು ಕುರಿತ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.