ADVERTISEMENT

ಅರಣ್ಯ ಅಲ್ಪವಾದರೂ ಸಂರಕ್ಷಣೆಗೆ ಆದ್ಯತೆ

ಅನುದಾನದ ಕೊರತೆಯ ನಡುವೆಯೂ ಜಿಲ್ಲೆಯ ಹಸಿರೀಕರಣಕ್ಕೆ ಕ್ರಮ: ಅರಣ್ಯ ಇಲಾಖೆಯಿಂದ ಹಲವು ಯೋಜನೆಗಳ ಅನುಷ್ಠಾನ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 14 ನವೆಂಬರ್ 2022, 4:59 IST
Last Updated 14 ನವೆಂಬರ್ 2022, 4:59 IST
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯ ಹಾಗೂ ಕುಂಚಾವರಂ ವನ್ಯಜೀವಿಧಾಮ
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯ ಹಾಗೂ ಕುಂಚಾವರಂ ವನ್ಯಜೀವಿಧಾಮ   

ಕಲಬುರಗಿ: ‘ಬಿಸಿಲು ನಾಡು’ ಕಲಬುರಗಿ ಜಿಲ್ಲೆಯು ತನ್ನದೇ ಆದ ಅರಣ್ಯ ಪ್ರದೇಶವನ್ನು ತನ್ನೊಡಲಲ್ಲಿ ಇಟ್ಟುಕೊಂಡು ಪೋಷಿಸುತ್ತಿದೆ.

ಇಲ್ಲಿನ ಭೌಗೋಳಿಕ ಪ್ರದೇಶವು ಹೆಚ್ಚು ಬಿಸಿಲಿನಿಂದ ಕೂಡಿದ್ದರೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಅರಣ್ಯ ವ್ಯಾಪಕವಾಗಿದೆ. ಅದರಲ್ಲೂ ಚಿಂಚೋಳಿ ತಾಲ್ಲೂಕು ಜಿಲ್ಲೆಯಲ್ಲೇ ವಿಶಾಲವಾದ ಅರಣ್ಯ/ವನ್ಯಜೀವಿ ಧಾಮವನ್ನು ಒಳಗೊಂಡಿರುವ ತಾಲ್ಲೂಕಾಗಿದೆ.

ಕಲಬುರಗಿ ಜಿಲ್ಲೆಯು ಸುಮಾರು 10,95,497 ಹೆಕ್ಟೇರ್‌ ಭೌಗೋಳಿಕ ಪ್ರದೇಶ ಒಳಗೊಂಡಿದೆ. ಇದರಲ್ಲಿನ ಅರಣ್ಯ ಪ್ರದೇಶವು 44,419 ಹೆಕ್ಟೇರ್‌ ಹೊಂದಿದೆ. ಇದರ ಜೊತೆಗೆ 8,796 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕಲಬುರಗಿ ಜಿಲ್ಲೆಯು ಶೇ 3.22ರಷ್ಟು ಅರಣ್ಯ ಪ್ರದೇಶ ಒಳಗೊಂಡಿದೆ.

ADVERTISEMENT

ಐದು ವಲಯ: ಕಲಬುರಗಿ ಜಿಲ್ಲೆಯನ್ನು ಒಟ್ಟು ಐದು ವಲಯಗಳನ್ನಾಗಿ ವಿಭಾಗಿಸಲಾಗಿದೆ. ಕಲಬುರಗಿ ವಲಯಕ್ಕೆ ಕಲಬುರಗಿ, ಜೇವರ್ಗಿ ಒಳಪಡುತ್ತದೆ. ಅದರಂತೆ ಆಳಂದ ವಲಯಕ್ಕೆ ಆಳಂದ, ಅಫಜಲಪುರ. ಚಿಂಚೋಳಿ, ಚಿಂಚೋಳಿ ವನ್ಯಜೀವಿಧಾಮ, ಚಿತ್ತಾಪುರ ವಲಯಕ್ಕೆ ಚಿತ್ತಾಪುರ ಮತ್ತು ಸೇಡಂ ಒಳಗೊಂಡಿದೆ. ಈ ಐದು ವಲಯಗಳಲ್ಲಿ ಬಹುತೇಕವಾಗಿ ಕರಚಲು ಅರಣ್ಯವಿದೆ. ಚಿಂಚೋಳಿ ವನ್ಯಜೀವಿ ವಲಯದಲ್ಲಿ ಒಣ ಮಿಶ್ರ ಎಲೆಯುದುರುವ ಅರಣ್ಯವಿದೆ.

ಹಸಿರೀಕರಣಕ್ಕೆ ಆದ್ಯತೆ: ’ಕಲಬುರಗಿ ನಗರ ಸೇರಿದಂತೆ ಇಡೀ ಜಿಲ್ಲೆಯನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ಇಲಾಖೆಯಿಂದಲೇ ವೃಕ್ಷ ಅಭಿಯಾನ/ಸಸಿ ನೆಡುವ ಅಭಿಯಾನ, ಚಿಣ್ಣರ ವನದರ್ಶನ ಹಾಗೂ ಸಸಿಗಳ ಪೋಷಣೆಗೆ ಪ್ರೋತ್ಸಾಹಧನ. ಇಂತಹ ಹಲವು ಯೋಜನೆಗಳನ್ನು ಹಾಕಿಕೊಂಡು ಅವುಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ‘ ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್‌ ಕೆಂಚಪ್ಪನವರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರಿಯಾಯಿತಿ ದರದಲ್ಲಿ ಸಸಿಗಳನ್ನು ರೈತರಿಗೆ ನೀಡಿ, ಅವರ ಜಮೀನಿನಲ್ಲಿ ನೆಟ್ಟು ಪೋಷಿಸಬೇಕು. ಇದಕ್ಕೆಂದೇ ರೈತರಿಗೆ ಪ್ರೋತ್ಸಾಹಧನವನ್ನು ಇಲಾಖೆಯಿಂದಲೇ ನೀಡಲಾಗುತ್ತದೆ’ ಎಂದರು.

‘ಚಿಣ್ಣರ ವನ ದರ್ಶನ’ ಅಭಿಯಾನದಡಿ ಈಚೆಗೆ ಚಿತ್ತಾಪುರ, ಆಳಂದ ಮತ್ತು ಕಮಲಾಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಚಿಂಚೋಳಿ ವನ್ಯಧಾಮಕ್ಕೆ ಕರೆದೊಯ್ದು ಅಲ್ಲಿಯ ಅರಣ್ಯ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು‘ ಎಂದು ತಿಳಿಸಿದರು.

ಅನುದಾನದ ಕೊರತೆ: ಕಲಬುರಗಿ ನಗರ ಹಸಿರೀಕರಣ ಸೇರಿ ಜಿಲ್ಲೆಯ ಅರಣ್ಯ ಪ್ರದೇಶ ಅಭಿವೃದ್ಧಿ ಮಾಡಲು ಪ್ರತಿ ವರ್ಷ ಸರ್ಕಾರದಿಂದ ₹ 5 ಕೋಟಿ ಅನುದಾನ ನೀಡಲಾಗುತ್ತದೆ. ಆದರೆ, ಕೋವಿಡ್ ಕಾರಣದಿಂದ ಎರಡು ವರ್ಷಗಳ ಅವಧಿಯಲ್ಲಿ ಅನುದಾನ ಬಂದಿಲ್ಲ’ ಎಂದು ವಿವರಿಸಿದರು.

‘ಕಲಬುರಗಿ ನಗರದಲ್ಲಿ ಇಲಾಖೆಯಿಂದಲೇ ಪ್ರತಿ ವರ್ಷ 15 ಸಾವಿರದಿಂದ 20 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತದೆ. ನಗರದ ಬುದ್ಧ ವಿಹಾರ, ಹೊಸ ಬಡಾವಣೆಗಳಲ್ಲಿ ಈಚೆಗೆ ಸಸಿಗಳನ್ನು ನೆಡುವ ಅಭಿಯಾನ ಕೂಡ ನಡೆಯಿತು. ಜೊತೆಗೆ ಸಸಿಗಳನ್ನು ಪೋಷಿಸಿ, ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೂ ವಿತರಿಸಲಾಗುತ್ತದೆ. ಆದರೆ, ಅನುದಾನದ ಕೊರತೆಯಿಂದ ಈ ವರ್ಷ ಕೇವಲ 900 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.