ADVERTISEMENT

ಬಸವ ಜಯಂತಿಯಲ್ಲಿ ಮಾಜಿ ಶಾಸಕ ತೇಲ್ಕೂರ– ಉಪನ್ಯಾಸಕ ಪಾಲಾಮೂರ ಮಾತಿನ ಚಕಮಕಿ

892ನೇ ಬಸವ ಜಯಂತಿ ಕಾರ್ಯಕ್ರಮ‌ದಲ್ಲಿ ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:48 IST
Last Updated 8 ಜೂನ್ 2025, 15:48 IST
ಚಿಂಚೋಳಿಯಲ್ಲಿ‌ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಇದ್ದರು
ಚಿಂಚೋಳಿಯಲ್ಲಿ‌ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಇದ್ದರು   

ಚಿಂಚೋಳಿ: ಸಮ ಸಮಾಜ‌ ನಿರ್ಮಾಣಕ್ಕೆ ಬಸವೇಶ್ವರರ ಕೊಡುಗೆ ಅಪಾರವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ 892ನೇ ಬಸವ ಜಯಂತಿ ಕಾರ್ಯಕ್ರಮ‌ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವೇಶ್ವರರು ಕುಲಕ್ಕೊಬ್ಬ ಶರಣರನ್ನು ಕರೆತಂದು ಅನುಭವ ಮಂಟಪದಲ್ಲಿ ಚರ್ಚಿಸಿ ವರ್ಗಭೇದ, ವರ್ಣಭೇದವಿಲ್ಲದ ಸತ್ಯಶುದ್ಧ ಕಾಯಕದ ಸಮ ಸಮಾಜ ನಿರ್ಮಿಸಿದರು. ಶರಣರ ಕಾಯಕ ದಾಸೋಹ ತತ್ವ ವಿಶ್ವಮಾನ್ಯವಾಗಿದೆ. ವಚನಗಳನ್ನು ಪ್ರತಿಯೊಬ್ಬರು ಓದಬೇಕು. ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. 

ADVERTISEMENT

ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ ಜಗತ್ತಿನ‌ ಮೊದಲ ಸಂಸತ್ತು ಎನಿಸಿದ ಅನುಭವ ಮಂಟಪ ಸ್ಥಾಪಿಸಿ ಅದರ ಮೂಲಕ ಸಾಮಾಜಿಕ‌ ನ್ಯಾಯದ ಪರಿಕಲ್ಪನೆ ಸಮಾಜಕ್ಕೆ ನೀಡಿದವರು ಬಸವೇಶ್ವರರು’ ಎಂದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪ್ರತಿಯೊಂದು ಮತಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ’ ಎಂದರು.

ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮುಖಂಡ ಗೌತಮ ಪಾಟೀಲ ಮಾತನಾಡಿದರು. ಶಿವಕುಮಾರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಚಿಂತನ ರಾಠೋಡ, ಬಸವರಾಜ ಮಾಲಿ, ಬಸವರಾಜ ಸಜ್ಜನ, ಬಾಬುರಾವ ಪಾಟೀಲ, ಗೌತಮ್ ಬೋಮ್ನಳ್ಳಿ, ವಿಜಯಕುಮಾರ ಚೆಂಗಟಾ, ಶಂಕರ ಶಿವಪೂರಿ, ಮಲ್ಲಿಕಾರ್ಜುನ ಬುಶೆಟ್ಟಿ, ವೀರಶೆಟ್ಟಿ ಇಮಡಾಪುರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ನೀಲಕಂಠ ಸೀಳಿನ ಮೊದಲಾದವರು ಇದ್ದರು. 

ಮಾಜಿ ಶಾಸಕ- ಉಪನ್ಯಾಸಕ ಮಾತಿನ ಚಕಮಕಿ:

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ವೀರಶೈವ ಲಿಂಗಾಯತರು ಒಂದೇ; ವೀರಶೈವರು ಬೇರೆ ಲಿಂಗಾಯತರು ಬೇರೆ ಎಂದರೆ ಒಪ್ಪುವುದಿಲ್ಲ‌. ಬಸವಣ್ಣನ ಹೆಸರು ಹೇಳುವ ಡೋಂಗಿಗಳು ಅವರ ಮನೆಯಲ್ಲಿ ಎಷ್ಟರ ಮಟ್ಟಿಗೆ ಬಸವ ತತ್ವ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿ ಆಮಂತ್ರಣ ಪತ್ರಿಕೆಯಲ್ಲಿ ರೇಣುಕಾಚಾರ್ಯರ ಫೋಟೊ ಹಾಕಿ‌ ವೇದಿಕೆಯ ಬ್ಯಾನರ್‌ನಲ್ಲಿ ಬಿಟ್ಟಿದ್ದೇಕೆ? ಎಂದರು. ಈ ಕುರಿತು ಮಾತನಾಡಲು ಇದು ಸೂಕ್ತ ವೇದಿಕೆಯಲ್ಲ ಎಂದು ರಾಷ್ಟ್ರೀಯ ಬಸವ ದಳದ ಮುಖಂಡರೊಬ್ಬರು ಹೇಳಿದರು.

‘ಏಕೆ ಮಾತನಾಡಬಾರದು? ಯಾವುದು ಸರಿ ಯಾವುದು ತಪ್ಪು ಜನರಿಗೆ ಗೊತ್ತಾಗಲಿ. ನನಗೆ ಪಾಠ ಹೇಳಲು ಬರಬೇಡಿ’ ಎಂದು ರಾಜಕುಮಾರ ಸಿಟ್ಟಾದರು. ಆಗ ವೇದಿಕೆಯಲ್ಲಿದ್ದ ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ ‘ಈ ಹಿಂದೆ ನೀವೇ ವಿರೋಧಿಸಿದ್ದೀರಿ. ನಾವು ಅಪ್ಪನಿಗೆ ಅಪ್ಪ ಎನ್ನುತ್ತಿದ್ದೇವೆ ಬೇರೆಯವರಿಗೆ ಅನ್ನಲು ಆಗುವುದೇ ಎಂದು ಪ್ರಶ್ನಿಸಿದರು. ಮಾಜಿ ಶಾಸಕರು ಭಾಷಣ ಮುಗಿಸಿದ ನಂತರ ಮಾತನಾಡಿದ ಮಲ್ಲಿಕಾರ್ಜುನ ‘ಬಸವಣ್ಣನ ಹೆಸರು ಹೇಳಿದ್ದಕ್ಕೆ ನನಗೆ ಮಠಾಧೀಶರು ವೇದಿಕೆಯಿಂದ ಇಳಿಸಿದ್ದಾರೆ. ಯಾವ ಮಠಾಧೀಶರು ಜಗದ್ಗುರುಗಳೂ ಬಸವಣ್ಣನ ಫೋಟೊ ಹಾಕುತ್ತಿಲ್ಲ’ ಎಂದರು.

ಬಸವ ಜಯಂತಿಯು ಗೊಂದಲದಲ್ಲಿಯೇ ಮುಗಿಯಿತು. ಮಾಜಿ ಶಾಸಕರ ಭಾಷಣದ ವಿಡಿಯೋ ವ್ಯಾಪಕವಾಗಿ ಹರಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.