ADVERTISEMENT

ಕಲಬುರ್ಗಿ: ಜಿಲ್ಲೆಯ ಏಳು ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 15:39 IST
Last Updated 30 ಸೆಪ್ಟೆಂಬರ್ 2019, 15:39 IST

ಕಲಬುರ್ಗಿ: ಜಿಲ್ಲೆಯ ಏಳು ಜಿಲ್ಲೆಗಳಿಗೆ ಈ ಬಾರಿ ಗಾಂಧಿ ಪುರಸ್ಕಾರವನ್ನು ಘೋಷಿಸಲಾಗಿದ್ದು, ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಅಫಜಲಪುರ ತಾಲ್ಲೂಕಿನ ಚೌಡಾಪುರ, ಆಳಂದದ ಮಾಡಿಯಾಳ, ಚಿಂಚೋಳಿಯ ಐನಾಪೂರ, ಚಿತ್ತಾಪುರದ ದಂಡೋತಿ, ಜೇವರ್ಗಿಯ ಮಳ್ಳಿ, ಕಲಬುರ್ಗಿಯ ಹರಸೂರ ಹಾಗೂ ಸೇಡಂನ ತೇಲ್ಕೂರ ಗ್ರಾಮ ಪಂಚಾಯಿತಿಗಳು ಪ್ರಶಸ್ತಿ ಪಡೆಯಲಿವೆ.

ಒಟ್ಟು 150 ಪ್ರಶ್ನೆಗಳಿಗೆ ಪಂಚ ತಂತ್ರಾಂಶದ ಮೂಲಕ ಉತ್ತರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿತ್ತು. ಒಟ್ಟು 5925 ಗ್ರಾ.ಪಂ.ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅತಿ ಹೆಚ್ಚು ಅಂಕಗಳಿಸಿದ ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಕಳಿಸಿಕೊಟ್ಟಿತ್ತು. ಅತಿ ಹೆಚ್ಚು ಅಂಕ ಪಡೆದ ಪಂಚಾಯಿತಿಗಳಿಗೆ ಖುದ್ದಾಗಿ ಭೇಟಿ ನೀಡಿದ ಸಿಇಒ ನೇತೃತ್ವದ ಅಧಿಕಾರಿಗಳ ಸಮಿತಿಯು ಅವರು ಸ್ಥಳ ಪರಿಶೀಲನೆ ನಡೆಸಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಪುರಸ್ಕಾರಕ್ಕೆ ಶಿಫಾರಸು ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.