ಕಲಬುರ್ಗಿ: ಇಲ್ಲಿನ ಮಿಸ್ಬಾ ನಗರದಲ್ಲಿ ಸೋಮವಾರ, ಯುವಕರ ಗುಂಪೊಂದು ಜಿಲ್ಲಾ ಮೀಸಲು ಪೊಲೀಸ್ ಪಡೆಯ ಎಎಸ್‌ಐ ಹಾಗೂ ಅವರ ಕುಟುಂಬದ ಮೇಲೆ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಘಟನೆ ಭಾನುವಾರ ಸಂಜೆ ನಡೆದಿದ್ದು, ಇದರ ವಿಡಿಯೊ ತುಣುಕು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಮೀಸಲು ಪೊಲೀಸ್ ಪಡೆಯಲ್ಲಿ ಎಎಸ್ಐ ಆಗಿರುವ ಖಾಜಾ ಪಟೇಲ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಮೇಲೆ ಗುಂಪು ದಾಳಿ ಮಾಡಿದೆ. ಎಎಸ್‌ಐ ಅವರ ಪುತ್ರನ ತಲೆಗೆ ಮಚ್ಚಿನಿಂದ ಹೊಡೆದಿದ್ದು, ತೀವ್ರ ಪೆಟ್ಟಾಗಿದೆ. ಖಾಜಾ ಹಾಗೂ ಅವರ ಪತ್ನಿಗೂ ರಾಡ್ ಮತ್ತು ಮಚ್ಚಿನಿಂದ ಹೊಡೆದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಖಾಜಾ ಪಟೇಲ್ ಅವರು ಕೆಲವು ದಿನಗಳ ಹಿಂದೆ ಮನೆ ಕಟ್ಟಿಸಿದ್ದು, ಆವರಣಗೋಡೆಕಟ್ಟುವ ಉದ್ದೇಶದಿಂದ ಮೂರು ಅಡಿ ಜಾಗವನ್ನು ಖಾಲಿ ಬಿಟ್ಟಿದ್ದಾರೆ. ಆದರೆ, ಈ ಜಾಗ ಬಳಸಿಕೊಂಡು, ಪಕ್ಕದ ಮನೆಯ ರುಕ್ಸಾನಾ ಬೇಗಂ ಎಂಬುವರು ಚರಂಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರುಕ್ಸಾನಾ ಬೇಗಂ ರೌಡಿಗಳಿಗೆ ಹೇಳಿ, ದಾಳಿ ಮಾಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.
ಮಾತಿಗೆ ಮಾತು ಬೆಳೆದ ಸಂದರ್ಭದಲ್ಲಿ ಏಕಾಏಕಿ 40ಕ್ಕೂ ಹೆಚ್ಚು ಹುಡುಗರ ಗುಂಪು ಎಎಸ್‌ಐ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿತು. ಅವರನ್ನು ಹೊರಗೆ ಎಳೆದುತಂದು, ಕೆಲವರು ರಾಡ್ ಹಾಗೂ ಕೈಯಿಂದ ಹೊಡೆದರು. ಬಿಡಿಸಿಕೊಳ್ಳಲು ಬಂದ ಅವರ ಪತ್ನಿ ಮೇಲೂ ಕೈ ಮಾಡಿದರು. ಸಹಾಯಕ್ಕಾಗಿ ಮಹಿಳೆ ಗೋಗರೆದರೂ ಯಾರೂ ಹತ್ತಿರ ಬರಲಿಲ್ಲ ಎಂದು
ದೂರಲಾಗಿದೆ.
‘ಜಗಳ ನಡೆದ ಸಂದರ್ಭದಲ್ಲಿ ಮಚ್ಚು ಹಿಡಿದುಕೊಂಡು ಬಂದ ಯುವಕನೊಬ್ಬ ಎಎಸ್‌ಐ ಪುತ್ರನ ತಲೆಗೆ ಹೊಡೆದ. ಅವರನ್ನು ಕಾಪಾಡಲು ಇನ್ನೊಬ್ಬ ವ್ಯಕ್ತಿಯ ಮುಂದೆ ಬಂದಾಗ, ಅವರ ಹೊಟ್ಟೆಗೆ ಇರಿಯಲು ಯತ್ನಿಸಿದ. ಅದೃಷ್ಟವಶಾತ್ ಬಿಡಿಸಲು ಬಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದರು’ ಎಂಬುದು ಪೊಲೀಸ್ ಮೂಲಗಳ ಮಾಹಿತಿ.
ಇದರ ಎಲ್ಲ ದೃಶ್ಯಗಳನ್ನು ಒಬ್ಬರು ಮನೆಯ ಮಹಡಿ ಮೇಲೆ ನಿಂತು ವಿಡಿಯೊ ಮಾಡಿದ್ದಾರೆ. ಘಟನೆಯಿಂದಾಗಿ ಮಿಸ್ಬಾ ನಗರದ ತುಂಬ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸ್ ವಾಹನಗಳು ಸ್ಥಳಕ್ಕೆ ಬಂದ ಶಬ್ದ ಕೇಳಿ ಗುಂಪು ಪರಾರಿ ಆಯಿತು ಎಂದೂ ಮೂಲಗಳು ಹೇಳಿವೆ.
‘ಕ್ಷುಲ್ಲಕ ಕಾರಣಕ್ಕೆ 40 ಪುಡಿ ರೌಡಿಗಳ ಗುಂಪು ನನ್ನ ಹಾಗೂ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಈ ವಿಷಯದ ಬಗ್ಗೆ ಪೊಲೀಸ್ ಕೇಸ್ ಮಾಡಿದರೆ ಜೀವ ಸಹಿತ ಬಿಡಿವುದಿಲ್ಲ ಎಂದು ಧಮಕಿ ಕೂಡ ಹಾಕಿದೆ’ ಎಂದು ಎಎಸ್‌ಐಗ್ರಾಮಿಣ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎಲ್ಲ ಆರೋಪಿಗಳೂ ತಲೆಮರೆಸಿಕೊಂಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.