ಅಫಜಲಪುರ: ದಕ್ಷಿಣ ಮಧ್ಯ ರೈಲ್ವೆ ಹಾದು ಹೋಗುವ ಮತ್ತು ದೇವಲ ಗಾಣಗಾಪುರ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆ ತೆರಳುವ ಭಕ್ತರಿಗೆ ಹೆಚ್ಚು ಅನುಕೂಲವಾಗುವ ಸ್ಟೇಷನ್ ಗಾಣಗಾಪುರ ಬಸ್ ನಿಲ್ದಾಣ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ನಿತ್ಯ ಪ್ರಯಾಣಿಕರು ಪರದಾಡುವಂತೆ ಆಗಿದೆ.
ಸ್ಟೇಷನ್ ಗಾಣಗಾಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು ದಿನ ಸಾವಿರಾರು ಜನ ಇಲ್ಲಿಂದ ಬೇರೆ ಕಡೆಗೆ ಸಂಚಾರ ಮಾಡುತ್ತಾರೆ. ಮಹಾರಾಷ್ಟ್ರದ ವಿವಿಧ ಭಾಗಗಳಿಂದ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆ ಹೋಗುವರು ಸ್ಟೇಷನ್ ಗಾಣಗಾಪುರ ಬಸ್ ನಿಲ್ದಾಣದಲ್ಲಿ ಇಳಿದು ಬೇರೆ ಬಸ್‌ಗಳನ್ನು ಹತ್ತಿ ಹೋಗುತ್ತಾರೆ.
ಸ್ಟೇಷನ್ ಗಾಣಗಾಪುರ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಸ್ವಂತ ಗ್ರಾಮ ಎನ್ನುವುದು ವಿಶೇಷ. ಅವರು ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಬಸ್ ನಿಲ್ದಾಣದಲ್ಲಿ ಯಾವ ಸೌಲಭ್ಯಗಳೂ ಇಲ್ಲ. ಬಸ್‌ನ ವೇಳಾಪಟ್ಟಿ ಬಗ್ಗೆ ವಿಚಾರಿಸಲು ಅಲ್ಲಿ ಯಾರೂ ಇರುವುದಿಲ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯಗಳು ಹಾಳುಬಿದ್ದಿವೆ. ಶುದ್ಧ ಕುಡಿಯುವ ನೀರಿನ ಘಟಕ, ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು ಹಾಳಾಗಿವೆ.
ಬಸ್ ನಿಲ್ದಾಣದ ಬದಿಯಲ್ಲಿ 15 ದಿನಗಳ ಹಿಂದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸುಮಾರು ₹4 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಎಂ.ವೈ.ಪಾಟೀಲ್ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು, ‘ಶಾಸಕರಾದ ಎಂ.ವೈ.ಪಾಟೀಲ್ ಅವರಿಗೆ ನಮ್ಮ ಸ್ವಂತ ಗ್ರಾಮವಾಗಿರುವ ಸ್ಟೇಷನ್ ಗಾಣಗಾಪುರದಲ್ಲಿ ನನ್ನ ಅವಧಿಯಲ್ಲಿ ಒಳ್ಳೆಯ ಗುಣಮಟ್ಟದ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದೇನೆ. ಆದರೆ ಅದು ಇವತ್ತು ಹಾಳಾಗಿದೆ ಅಲ್ಲಿ ಯಾವುದೇ ಸೌಲಭ್ಯವಿಲ್ಲದೆ ಪ್ರಯಾಣಿಕರು ಕಷ್ಟ ಪಡುವಂತಾಗಿದೆ. ಸ್ಟೇಷನ್ ಗಾಣಗಾಪುರದಲ್ಲಿ ಮಧ್ಯೆ ರೈಲ್ವೆ ಹಾದು ಹೋಗಿದೆ. ಅಲ್ಲದೆ ಈ ನಿಲ್ದಾಣ ದತ್ತ ಮಹಾರಾಜರ ದರ್ಶನಕ್ಕೆ ಹೋಗುವ ಭಕ್ತರಿಗೆ ಸಾಕಷ್ಟು ಅನುಕೂಲವಾಗಿದೆ. ಸುತ್ತಲಿನ ಹತ್ತು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಗ್ರಾಮ ಸಾಕಷ್ಟು ಬೆಳೆದಿದ್ದು ಅದರ ತಕ್ಕಂತೆ ಸೌಲಭ್ಯ ಕೊಡಬೇಕು. ಶಾಸಕರು ಇದರ ಬಗ್ಗೆ ಗಮನಹರಿಸಿ ಕ್ರಮ ಜರುಗಿಸಬೇಕು’ ಎಂದು ಕಾರ್ಯಕ್ರಮದಲ್ಲಿ ಒತ್ತಾಯಿಸಿದ್ದರು. ಆದರೆ ಇಲ್ಲಿವರೆಗೆ ಯಾವುದೇ ಕೆಲಸ ಕಾರ್ಯಗಳು ಆರಂಭವಾಗಿಲ್ಲ ಎಂಬುದು ಗ್ರಾಮಸ್ಥರ ಮಾತು.
ಈ ಭಾಗದ ಜನರಿಗೆ ಸ್ಟೇಷನ್ ಗಾಣಗಾಪುರ ಬಸ್ ನಿಲ್ದಾಣ ಅನುಕೂಲವಾಗಿದೆ. ಆದರೆ ಅದಕ್ಕೆ ಸೌಲಭ್ಯಗಳಿಲ್ಲ. ಈ ಬಗ್ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ತಿಳಿಸಿದ್ದು ಸೌಲಭ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಎಂ.ವೈ.ಪಾಟೀಲ ಶಾಸಕ
ಬೇಸಿಗೆ ಇರುವುದರಿಂದ ಸ್ಟೇಷನ್ ಗಾಣಗಾಪುರದ ಬಸ್ ನಿಲ್ದಾಣದಲ್ಲಿ ಶೀಘ್ರ ಕುಡಿಯುವ ನೀರು ಶೌಚಾಲಯದ ವ್ಯವಸ್ಥೆ ಮಾಡಬೇಕು. ವಿದ್ಯುತ್ ದ್ವೀಪಗಳು ಹಾಳಾಗಿದ್ದು ರಾತ್ರಿ ವೇಳೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆಮಾಲಿಕಯ್ಯ ಗುತ್ತೇದಾರ್ ಮಾಜಿ ಸಚಿವ
ಸ್ಟೇಷನ್ ಗಾಣಗಾಪುರದ ಬಸ್ ನಿಲ್ದಾಣ ಬಗ್ಗೆ ಮಾಹಿತಿ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತೇನೆಎಂ. ರಾಚಪ್ಪ ಎಂ.ಡಿ ಕೆಕೆಆರ್‌ಟಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.