ಅಫಜಲಪುರ: ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಸಮಿತಿಯವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಭಕ್ತರು ಪರದಾಡುವಂತಾಗಿದೆ.
ದೇವಸ್ಥಾನಕ್ಕೆ ಹಲವಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಮುಖ್ಯ ರಸ್ತೆಯನ್ನು ತಿಂಗಳ ಹಿಂದೆ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ ರಸ್ತೆಯು ಭಕ್ತರು ಎಸೆದು ಹೋಗುವ ತ್ಯಾಜ್ಯ ವಸ್ತಗಳಿಂದ ಮಲಿನಗೊಂಡಿದ್ದು ರೋಗ ಹರಡುವ ಭೀತಿ ಉಂಟಾಗಿದೆ.
ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಿಸಲಾಗಿದೆ. ಆದರೆ ಮಹಾದ್ವಾರ ಮುಂದೆ ಖಾಸಗಿ ವಾಹನಗಳು ನಿಲ್ಲುತ್ತವೆ. ಇದರಿಂದ ಭಕ್ತರಿಗೆ ತೊಂದರೆ ಆಗುತ್ತಿದೆ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಮದ ಹೊರಗಡೆ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಆದರೆ 10 ವರ್ಷ ಕಳೆದರೂ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮಸ್ಥರಿಗೆ, ಯಾತ್ರಿಕರಿಗೆ ಶುದ್ಧ ಕುಡಿಯುವ ನೀರು ದೊರೆಯದಂತಾಗಿದೆ.
ದೀಪಾವಳಿಗೆ ದೇವಸ್ಥಾನದಲ್ಲಿ ಸಿಡಿ ಕಾರ್ಯಕ್ರಮ ಆರಂಭವಾಗಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ. ಪ್ರತಿ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರೂ ಇಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಚಳಿಗಾಲ ಇರುವುದರಿಂದ ಕೊರೊನಾ ವೈರಾಣು ಮತ್ತಷ್ಟು ಹರಡುವ ಭೀತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಬಸ್ ನಿಲ್ದಾಣ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಭಕ್ತರಿಗೆ ಶೌಚಾಲಯ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಸುತ್ತಮುತ್ತ ಪರಿಸರ ಹಾಳಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮೇಲಧಿಕಾರಿಗಳು, ಉಪ ವಿಭಾಗಾಧಿಕಾರಿ ಗಮನ ಹರಿಸಬೇಕು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಹಾಗೂ ಜೈ ಕರವೇ ಅಧ್ಯಕ್ಷ ಸುರೇಶ ಅವಟೆ ಒತ್ತಾಯಿಸಿದ್ದಾರೆ.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು ಬರುವ ಭಕ್ತರಿಗೆ ಸೌಲಭ್ಯ ಒದಗಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಕುಮಾರ ಬಡದಾಳ ಆಗ್ರಹಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.