ADVERTISEMENT

Kalaburagi Crime | ಪ್ರತ್ಯೇಕ ಪ್ರಕರಣ: 60 ಗ್ರಾಂ ಚಿನ್ನಾಭರಣ ಕಳವು

ಎರಡೂ ಪ್ರಕರಣದಲ್ಲಿ ಮನೆಗಳ ಬೀಗ ಮುರಿದು ಕೈಚಳಕ ತೋರಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:53 IST
Last Updated 22 ಆಗಸ್ಟ್ 2025, 5:53 IST
ಕಲಬುರಗಿಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಅವರು ಮಹಿಳೆಗೆ ಚಿನ್ನಾಭರಣ ಹಸ್ತಾಂತರಿಸಿದರು
ಕಲಬುರಗಿಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಅವರು ಮಹಿಳೆಗೆ ಚಿನ್ನಾಭರಣ ಹಸ್ತಾಂತರಿಸಿದರು   

ಕಲಬುರಗಿ: ನಗರದ ಕುಸನೂರು ಪ್ರದೇಶದ ಸರಸ್ವತಿಪುರ ಕಾಲೊನಿಯಲ್ಲಿ ಮನೆಗೆ ಹಾಕಿದ್ದ ಬೀಗ ಒಡೆದ ಕಳ್ಳರು ₹ 1.48 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸಂಗೀತಾ ಪವಾರ ಆಭರಣ ಕಳೆದುಕೊಂಡ ಮಹಿಳೆ.

‘ಮನೆಗೆ ಬೀಗ ಹಾಕಿ ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಗ್ರಾಮದಲ್ಲಿ ಸಹೋದರನ ಮನೆ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದೆ. ಮರುದಿನ ಬಂದು ನೋಡುವಷ್ಟರಲ್ಲಿ ಮನೆ ಬೀಗ ಒಡೆದ ಕಳ್ಳರು, 30 ಗ್ರಾಂ ಬಂಗಾರದ ಚಿನ್ನಾಭರಣ, 20 ತೊಲೆಯ ಬೆಳ್ಳಿಯ ಕಾಲುಚೈನ್‌ ಹಾಗೂ ₹ 22 ಸಾವಿರ ಕದ್ದಿದ್ದಾರೆ’ ಎಂದು ಸಂಗೀತಾ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಇನ್ನೊಂದು ಪ್ರಕರಣದಲ್ಲಿ ನಗರದ ಆಳಂದ ರಸ್ತೆ ಕೃಷಿ ಕಾಲೇಜು ಎದುರಿನ ಸಿದ್ಧಗಂಗಾ ನಗರದ ಮನೆಯೊಂದ ಬೀಗ ಮುರಿದ ಕಳ್ಳರು ₹ 1.33 ಲಕ್ಷ ಮೌಲ್ಯ ಚಿನ್ನ–ಬೆಳ್ಳಿ ಆಭರಣ ಹಾಗೂ ₹ 15 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿವೃತ್ತ ಉದ್ಯೋಗಿ ಶರಣಪ್ಪ ಮೂಗನೂರ ಆಭರಣ, ನಗದು ಕಳೆದುಕೊಂಡವರು.

‘ಪತ್ನಿಗೆ ಹುಷಾರಿಲ್ಲದ ಕಾರಣ ಫಿಸಿಯೋಥೆರಪಿ ಮಾಡಿಸಲು ರಾಯಚೂರಿನಲ್ಲಿರುವ ಮಗನ ಬಳಿ ಆಗಾಗ ಹೋಗುತ್ತಿದ್ದೆವು. ಅದರಂತೆ ಆಗಸ್ಟ್‌ 16ರಂದು ರಾಯಚೂರಿಗೆ ಹೋಗಿದ್ದೆವು. ಆ.20ರಂದು ನಮ್ಮ ಮನೆ ಎದುರಿನವರು ಫೋನ್‌ ಮಾಡಿದಾಗ ಕಳುವಾಗಿರುವುದು ಗೊತ್ತಾಗಿದೆ. 30 ಗ್ರಾಂ ಬಂಗಾರದ ಆಭರಣಗಳು, 130 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ₹ 15 ಸಾವಿರ ನಗದು ಕಳವುವಾಗಿವೆ’ ಎಂದು ದೂರಿನಲ್ಲಿ ಶರಣಪ್ಪ ತಿಳಿಸಿದ್ದಾರೆ.

ಈ ಕುರಿತು ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಅಕ್ರಮ ಮಾರಾಟ

ಕಲಬುರಗಿ ತಾಲ್ಲೂಕಿನ ಪಾಣೆಗಾಂವ ಗ್ರಾಮದ ಶಿವಾಜಿ ತಾಂಡಾದಲ್ಲಿನ ಕಿರಾಣಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಮದ್ಯ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕಿರಾಣಿ ಅಂಗಡಿ ನಡೆಸುತ್ತಿದ್ದ ಭೀಮು ರಾಠೋಡ ಬಂಧಿತ. ಆರೋಪಿಯಿಂದ ₹ 11,945 ಮೌಲ್ಯದ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಬಾಟಲಿಗಳು, ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಫರಹತಾಬಾದ್‌ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಮಟ್ಕಾ ಜೂಜಾಟ

ನಗರದ ಡಬರಾಬಾದ್‌ ಕ್ರಾಸ್ ಹತ್ತಿರದ ಈದ್ಗಾ ಮೈದಾನ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಟೊ ಚಾಲಕ ಬಲರಾಮ ಬಂಧಿತ. ಆತನಿಂದ ₹ 1,600 ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್.ಜಿ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: ಐವರ ವಿರುದ್ಧ ಪ್ರಕರಣ

ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಓಂ ಸಾಯಿ ಕಿರಾಣಾ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹3,830 ವಶಕ್ಕೆ ಪಡೆಯಲಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಅಸ್ವಸ್ಥ ಯುವಕ ಕಾಣೆ

19 ವರ್ಷದ ಮಾನಸಿಕ ಅಸ್ವಸ್ಥ ಮಗ ಕಾಣೆಯಾಗಿದ್ದಾನೆ ಎಂದು ಕಲಬುರಗಿ ಮಿಲ್ಲತ್‌ ನಗರದ ನಿವಾಸಿ, ಯುವಕನ ತಂದೆ ಅಬ್ದುಲ್‌ ಸತ್ತಾರ ಸಬರ್ಬನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

48 ಗಂಟೆಗಳಲ್ಲಿ ಚಿನ್ನಾಭರಣ ಪತ್ತೆ

ಕಲಬುರಗಿ: ಚಿಕಿತ್ಸೆ ಪಡೆಯಲು ಬಂದು ಆಟೊದಲ್ಲಿ ಬಿಟ್ಟಿದ್ದ ವೃದ್ಧರೊಬ್ಬರ ಚಿನ್ನಾಭರಣವನ್ನು ನಗರ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸರು 48 ಗಂಟೆಗಳಲ್ಲೆ ಪತ್ತೆ ಮಾಡಿದ್ದಾರೆ. ಪತ್ತೆಯಾದ ಚಿನ್ನಾಭರಣಗಳನ್ನು ಗುರುವಾರ ನಗರ ಪೊಲೀಸ್ ಕಮಿಷರ್‌ ಶರಣಪ್ಪ ಎಸ್‌.ಡಿ. ಆಭರಣ ಕಳೆದುಕೊಂಡಿದ್ದ ಮಹಿಳೆ ರತ್ನಾಬಾಯಿ ಅವರಿಗೆ ಹಸ್ತಾಂತರಿಸಿದರು. ಏನಿದು ಘಟನೆ?: ರತ್ನಾಬಾಯಿ ಇತ್ತೀಚೆಗೆ ಚಿಕಿತ್ಸೆ ಪಡೆಯಲು ಜವಳಿ ಕಾಂಪ್ಲೆಕ್ಸ್‌ ಸಮೀಪದ ಆಸ್ಪತ್ರೆಗೆ ಆಟೊದಲ್ಲಿ ಬಂದಿದ್ದರು. ಎಕ್ಸ್‌ರೇ ಮಾಡಿಸಬೇಕಿದ್ದ ಕಾರಣ ಚಿನ್ನಾಭರಣ ತೆಗೆದು ಬ್ಯಾಗ್‌ನಲ್ಲಿ ಹಾಕಿ ಆಟೊದಲ್ಲಿ ಇಟ್ಟಿದ್ದರು. ಬಳಿಕ ಅದೇ ಆಟೊದಲ್ಲಿ ಅವರ ಮಗಳು ತಂದೆಯನ್ನು ಕರೆತರಲು ವಿದ್ಯಾನಗರ ಪ್ರದೇಶಕ್ಕೆ ಹೋಗಿದ್ದರು. ಆಗ ಚೀಲ ಮರೆತು ಆಟೊದಿಂದ ಇಳಿದು ಮನೆಗೆ ತೆರಳಿದ್ದರು. ಮಗಳು ಮರಳಿ ಆಸ್ಪತ್ರೆಗೆ ಬಂದಾಗ ಚಿನ್ನಾಭರಣ ಆಟೊದಲ್ಲಿ ಬಿ‌ಟ್ಟಿದ್ದು ಗೊತ್ತಾಗಿತ್ತು. ಚಿನ್ನಾಭರಣ ಪತ್ತೆಗಾಗಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಅದರಲ್ಲಿ ಸಂಚಾರ ಠಾಣೆ 1ರ ಇನ್‌ಸ್ಪೆಕ್ಟರ್‌ ಮಹಾಂತೇಶ ಪಾಟೀಲ ಹಾಗೂ ಸಿಬ್ಬಂದಿ ಆಸೀಫ್‌ ಅವರ ತಂಡವು ಆಟೊ ಸಂಚರಿಸಿದ ಮಾರ್ಗದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಆಟೊ ಚಾಲಕನನ್ನು ಪತ್ತೆ ಮಾಡಿ ಚಿನ್ನಾಭರಣ ವಾರಸುದಾರರಿಗೆ ಮರಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.