ADVERTISEMENT

ಭವನ ನಿರ್ಮಾಣ ಆರಂಭವಾಗದಿದ್ದರೆ ಅನುದಾನ ವಾಪಸ್‌: ಗೋವಿಂದ ಕಾರಜೋಳ ಎಚ್ಚರಿಕೆ

ಸಚಿವರಿಂದ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:47 IST
Last Updated 18 ಅಕ್ಟೋಬರ್ 2019, 13:47 IST
ಕಲಬುರ್ಗಿಯಲ್ಲಿ ನಡೆದ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಇಲಾಖೆಗಳ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಎಂಜಿನಿಯರ್‌ ಎನ್‌.ಎಸ್‌.ರಮೇಶ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌.ಪೆದ್ದಪ್ಪಯ್ಯ ಇದ್ದರು
ಕಲಬುರ್ಗಿಯಲ್ಲಿ ನಡೆದ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಇಲಾಖೆಗಳ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಎಂಜಿನಿಯರ್‌ ಎನ್‌.ಎಸ್‌.ರಮೇಶ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌.ಪೆದ್ದಪ್ಪಯ್ಯ ಇದ್ದರು   

ಕಲಬುರ್ಗಿ: ಸಮಾಜ ಕಲ್ಯಾಣ ಇಲಾಖೆಯ ಕಲಬುರ್ಗಿ ಕಂದಾಯ ವಿಭಾಗದ ಆರು ಜಿಲ್ಲೆಗಳಲ್ಲಿ ಕೈಗೆತ್ತಿಕೊಂಡ ವಿವಿಧ ಭವನಗಳ ನಿರ್ಮಾಣ ಕಾರ್ಯವನ್ನು ಮುಂದಿನ 15 ದಿನಗಳಲ್ಲಿ ಆರಂಭಿಸದಿದ್ದರೆ ಅನುದಾನ ರದ್ದು ಮಾಡಿ ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವರೂ ಆದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಎರಡೂ ಇಲಾಖೆಗಳ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಸೇರಿದಂತೆ 1455 ಭವನಗಳ ನಿರ್ಮಾಣ ಕಾರ್ಯ ಆರಂಭವೇ ಆಗಿಲ್ಲ. 560 ಭವನಗಳಿಗೆ ನಿವೇಶನ ಲಭ್ಯವಾಗಿಲ್ಲ. ಇದುವರೆಗೆ ಕಾಮಗಾರಿ ಆರಂಭವಾಗದ ಸಮುದಾಯ ಭವನಗಳಿಗೆ ಮೀಸಲಿಟ್ಟ ಅನುದಾನವನ್ನು ವಾಪಸ್‌ ಪಡೆಯುವುದು ಅನಿವಾರ್ಯವಾಗುತ್ತದೆ ಎಂದರು.

‘2008ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟಾರೆ 7000 ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಇವುಗಳಿಗೆ ₹ 1414 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿ ಇದುವರೆಗೆ ₹ 978 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 2774 ಭವನಗಳು ಮಾತ್ರ ಪೂರ್ಣಗೊಂಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವರದಿ ಪಡೆದು ಜಾತಿ ಪ್ರಮಾಣ ಪತ್ರ ವಿತರಿಸಿದ ತಹಶೀಲ್ದಾರ್‌ ಮತ್ತು ಪಡೆದುಕೊಂಡ ಅರ್ಜಿದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ್‌ ಕೆ.ಎಚ್. ಅವರಿಗೆ ನಿರ್ದೇಶನ ನೀಡಿದರು.

ಅಂತರ್ಜಾತಿ ವಿವಾಹ ಮಾಡಿಕೊಂಡವರಿಗೆ ಪ್ರೋತ್ಸಾಹ ಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದ ಬೀದರ್‌ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ‘ಇಂತಹ ವಿಳಂಬ ನೀತಿಯನ್ನು ಸಹಿಸಲಾಗದು. ಬೀದರ್‌ನಿಂದ ನಿಮ್ಮನ್ನು ವಿಜಯಪುರ ಅಥವಾ ಬಾಗಲಕೋಟೆಗೆ ವರ್ಗಾವಣೆ ಮಾಡುತ್ತೇನೆ. ಸಿದ್ಧವಾಗಿರಿ’ ಎಂದರು.

ದೇವದಾಸಿ ಪದ್ಧತಿ ಹೆಚ್ಚಾಗಿ ಇರುವ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ದೇವದಾಸಿಯರ ಪುನರ್ವಸತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದಕ್ಕೆ ಆಯಾ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದರು.

ಸಿಬ್ಬಂದಿ, ಅನುದಾನ ಇಲ್ಲವೆಂದು ನೆಪ ಹೇಳಬೇಡಿ: ಲೋಕೋಪಯೋಗಿ ಇಲಾಖೆ ಉಪವಿಭಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್‌ ಕರೆಯುವುದು, ಅನುಮೋದನೆ ನೀಡಲು ಅಗತ್ಯ ಸಿಬ್ಬಂದಿ ಇಲ್ಲ ಎಂದು ಸೇಡಂ ವಿಭಾಗದ ಎಂಜಿನಿಯರ್‌ ಒಬ್ಬರು ಸಚಿವರ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಉಪವಿಭಾಗದ ಜೂನಿಯರ್‌ ಎಂಜಿನಿಯರ್‌ಗಳನ್ನು ಬಳಸಿಕೊಂಡು ಕೆಲಸ ಮಾಡಿಸಿ. ತೀರಾ ಅಗತ್ಯಬಿದ್ದರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿ ಎಂದರು.

ಯೋಜನೆಯೊಂದರ ಅನುಷ್ಠಾನಕ್ಕೆ ಅನುದಾನ ಇಲ್ಲವೆಂದು ಹೇಳಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೂ, ಅನುದಾನದ ನೆಪ ಹೇಳದೇ ಕೆಲಸ ಮಾಡಿ. ಇಲಾಖೆಗೆ ₹ 30 ಸಾವಿರ ಕೋಟಿ ಅನುದಾನವಿದ್ದು, ಈ ಬಗ್ಗೆ ಪ್ರಸ್ತಾವ ಕಳಿಸಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಕಲಬುರ್ಗಿ ಜಿಲ್ಲೆಗೆ ಈ ಬಾರಿ ₹ 1066 ಕೋಟಿ ಮಂಜೂರಾಗಿದ್ದು, ಅದರಲ್ಲಿ ₹ 235 ಕೋಟಿ ವೆಚ್ಚವಾಗಿದೆ. ಎಸ್‌ಸಿ‍ಪಿ ಯೋಜನೆಯಡಿ ಬಿಡುಗಡೆಯಾದ ₹ 113 ಕೋಟಿ ಪೈಕಿ ₹ 1.46 ಕೋಟಿ ವೆಚ್ಚವಾಗಿದೆ ಎಂಬುದನ್ನು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಅಬ್ದುಲ್‌ ಮುಖ್ತಾರ್‌ ಅಹ್ಮದ್‌ ಗಮನಕ್ಕೆ ತರುತ್ತಿದ್ದಂತೆಯೇ, ‘ಇದು ಬಹಳ ಕಳಪೆ ಸಾಧನೆ. ಇಲಾಖೆಯಲ್ಲಿ ಅಸಮರ್ಥ ಅಧಿಕಾರಿಗಳಿಗೆ ಜಾಗವಿಲ್ಲ. ಡಿಸೆಂಬರ್‌ ಒಳಗಾಗಿ ಶೇ 50ರಷ್ಟಾದರೂ ಹಣ ವೆಚ್ಚ ಮಾಡಬೇಕು. ಇಲ್ಲದಿದ್ದರೆ ಇಲಾಖೆಗೆ ಹಂಚಿಕೆ ಮಾಡಿದ ಅನುದಾನವನ್ನು ವಾಪಸ್‌ ಪಡೆದು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಕಟ್ಟಡಕ್ಕೆ ನೀಡುವೆ’ ಎಂದರು.

ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಎಂಜಿನಿಯರ್‌ ಎನ್‌.ಎಸ್‌.ರಮೇಶ್‌, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌.ಪೆದ್ದಪ್ಪಯ್ಯ, ಶಾಸಕರಾದ ಅವಿನಾಶ್‌ ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನಪರಿಷತ್‌ ಸದಸ್ಯ ಬಿ.ಜಿ.ಪಾಟೀಲ ಹಾಗೂ ಕಲಬುರ್ಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಎರಡೂ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.