ಕಲಬುರ್ಗಿ: ಕೊರೊನಾ ಸೋಂಕು ಹೆಚ್ಚು ಜನರಿಗೆ ಹರಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್ 14ರವರೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಇದನ್ನೂ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆ ಮೇಲೆ ಓಡಾಡುವವರ ಬೈಕ್, ಸ್ಕೂಟರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಜಪ್ತಿ ಮಾಡಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಅನಗತ್ಯವಾಗಿ ಓಡಾಡುವವರನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಿಲಿಟರಿ ಕರೆಸಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ‘ಅನಗತ್ಯವಾಗಿ ಓಡಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಅವರಿಗೆ ಬರೀ ಎಚ್ಚರಿಕೆ ಕೊಟ್ಟರೆ ಸಾಲದು. ಬೈಕ್‌ಗಳನ್ನು ಜಪ್ತಿ ಮಾಡಿ. ಪೆಟ್ರೋಲ್ ತುಂಬಿಸಿಕೊಳ್ಳಲು ಅವಕಾಶ ಕೊಡಬೇಡಿ’ ಎಂದು ಡಿಸಿಪಿ ಡಿ. ಕಿಶೋರಬಾಬು ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗ್ರಾಮಾಂತರ ಪ್ರದೇಶದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ನಿರ್ದೇಶನ ನೀಡಿದರು.
‘ಅಗತ್ಯಬಿದ್ದರೆ ಮಿಲಿಟರಿ ಕರೆಸಬಹುದು. ಇಲ್ಲವೇ ಸಿಆರ್‌ಪಿಎಫ್ ಪಡೆಯನ್ನು ಕರೆಸಬಹುದು’ ಎಂದ ಉಪಮುಖ್ಯಮಂತ್ರಿ ಅವರು ಆಯ್ಕೆಯನ್ನು ಜಿಲ್ಲಾಧಿಕಾರಿ ಅವರಿಗೇ ಬಿಟ್ಟರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ‘ಹೈದರಾಬಾದ್‌ನ ಸಿಆರ್‌ಪಿಎಫ್ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ನೆರವು ಬೇಕಿದ್ದರೆ ಕೇಳಿ ಎಂದಿದ್ದಾರೆ. ಈ ಬಗ್ಗೆ ಅಂತಿನ ನಿರ್ಣಯ ಇನ್ನಷ್ಟೇ ತೆಗೆದುಕೊಳ್ಳಬೇಕು’ ಎಂದರು.
‘ಜಿಲ್ಲೆಯಲ್ಲೇ ಇರುವ ಕೆಎಸ್‌ಆರ್‌ಪಿ ಸಿಬ್ಬಂದಿಯಿಂದ ಒಂದು ಪಥ ಸಂಚಲನ ನಡೆಸಿರಿ’ ಎಂದು ಕಾರಜೋಳ ಅವರು ಸೂಚಿಸಿದರು.
ಸುಳ್ಳು ಸುದ್ದಿ ಹರಡಿದರೆ ಕ್ರಮ: ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡುವುದು. ಯಾವುದೋ ವಿಡಿಯೊವನ್ನು ಕೊರೊನಾ ರೋಗಿ ಎಂದು ಹಾಕುವುದು ನಡೆಯುತ್ತಿದೆ. ಭಾನುವಾರ ಬೆಳಿಗ್ಗೆಯೇ ಜಮಖಂಡಿ ಬಳಿಯ ನಾಗನೂರು ಗ್ರಾಮದ ವ್ಯಕ್ತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡಿದ್ದರಿಂದ ಬೆಳಿಗ್ಗೆ ನನಗೆ ಅದೇ ಕೆಲಸವಾಯಿತು. ಹೀಗಾಗಿ, ಅಂತಹ ಸುಳ್ಳು ಸುದ್ದಿ ಹರಡುವವರನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಮಾತನಾಡಿ, ‘ಜನರು ಮನೆಯಿಂದ ಹೊರಬರದಂತೆ ತಡೆಯಲು ಅವರ ಬಡಾವಣೆಗಳಿಗೇ ತರಕಾರಿಗಳನ್ನು ತಲುಪಿಸಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಗರವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ವಾಹನಗಳಲ್ಲಿ ರಾಸಾಯನಿಕ ತುಂಬಿ ಸಿಂಪಡಿಸುವ ಮೂಲಕ ಕೊರೊನಾ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಅಂಗಡಿಗಳ ಎದುರು ಒಂದೊಂದು ಮೀಟರ್ ಗುರುತು ಹಾಕಿ ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಶಾಸಕರ ಮಧ್ಯೆ ಜಟಾಪಟಿ: ದತ್ತಾತ್ರೇಯ ಪಾಟೀಲ ರೇವೂರ ಅವರು ಉಪಮುಖ್ಯಮಂತ್ರಿ ಎದುರು ನಗರದ ಸಮಸ್ಯೆಗಳನ್ನು ಹೇಳಲು ಮುಂದಾದಾಗ ಆಳಂದ ಶಾಸಕ ಸುಭಾಷ್ ಗುತ್ತೇದಾರ ಅವರು ರೇವೂರ ಅವರೊಂದಿಗೆ ಮಾತಿನ ಜಟಾಪಟಿ ನಡೆಸಿದರು. ಬರೀ ಕಲಬುರ್ಗಿ ವಿಚಾರ ಹೇಳಿದರೆ ಹೇಗೆ ಆಳಂದದ ಸಮಸ್ಯೆಯನ್ನೂ ಹೇಳಲು ಬಿಡಿ ಎಂದರು.
ಗುತ್ತೇದಾರ ಅವರ ಮಾತುಗಳನ್ನೂ ಕೇಳಿಸಿಕೊಂಡ ಕಾರಜೋಳ ಅವರು ಅಮರ್ಜಾ ಜಲಾಶಯಕ್ಕೆ ನೀರು ಪೂರೈಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಭರವಸೆ ನೀಡಿದರು.
‘ಎರಡು ತಿಂಗಳಿಗೆ ಆಗುವಷ್ಟು ಪಡಿತರವನ್ನು ಈಗಲೇ ಶೇಖರಿಸಿ ಇಟ್ಟುಕೊಳ್ಳಿ. ಎಲ್ಲ ಪಡಿತರ ಚೀಟಿದಾರರಿಗೂ ನಿಯಮಾನುಸಾರ ದವಸ ಧಾನ್ಯಗಳನ್ನು ನೀಡಬೇಕು. ಅಷ್ಟೊಂದು ದಾಸ್ತಾನು ಇಲ್ಲದಿದ್ದರೆ ಈಗಲೇ ಬೇಡಿಕೆ ಇಟ್ಟು ತರಿಸಿಕೊಳ್ಳಿ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
‘ಪಿಡಿಒಗಳು ಕೇಂದ್ರ ಸ್ಥಾನದಲ್ಲಿರಬೇಕು’
ಕೊರೊನಾ ಸೋಂಕು ಮೂರನೇ ಹಂತದಲ್ಲಿರುವ ಈ ಸಂದರ್ಭದಲ್ಲಿ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಎಲ್ಲ ಉಸ್ತುವಾರಿ ವಹಿಸಬೇಕು. ಅವರಿಗೆ ಮನೆ ಮನೆಗೆ ತೆರಳಿ ಸರ್ವೆ ಮಾಡುವ ಕೆಲಸವನ್ನು ಮಾಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜಿಲ್ಲಾ ಪಂಚಾಯಿತಿ ಸಿಇಒ ಡಾ. ರಾಜಾಪಿ. ಅವರಿಗೆ ಸೂಚನೆ ನೀಡಿದರು.
‘ಕುಡಿಯುವ ನೀರಿಗೆ ತೊಂದರೆಯಿಲ್ಲ’
ನಾರಾಯಣಪುರ ಜಲಾಶಯದಿಂದ ನೀರನ್ನು ಭೀಮಾ ನದಿಗೆ ನಿರ್ಮಿಸಿರುವ ಬ್ಯಾರೇಜ್‌ಗೆ ಹರಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ಎಲ್ಲೆಲ್ಲಿ ನೀರು ಪೂರೈಕೆ ಸಮಸ್ಯೆ ಇದೆ ಎಂಬುದನ್ನು ತಿಳಿಸಿರಿ. ಅಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ಅವರು ನಗರ ನೀರು ಪೂರೈಕೆ, ಗ್ರಾಮೀಣ ನೀರು ಪೂರೈಕೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು.
ನಗರಕ್ಕೆ ನೀರು ಪೂರೈಸುವ ಬ್ಯಾರೇಜ್ ಗೇಟ್ ದುರಸ್ತಿ ಮಾಡಬೇಕಿದೆ. ಅದಕ್ಕೆ ₹ 2.5 ಕೋಟಿ ನೀಡಬೇಕು ಎಂಬ ಎಂಜಿನಿಯರ್ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿ, ಜಿಲ್ಲಾ ಖನಿಜ ನಿಧಿಯಿಂದ ಹಣವನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಸೂಚಿಸಿದರು.
***
ಕೊರೊನಾ ಸೋಂಕು ತಡೆಯಲು ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಪೌರಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು
ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ
ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಗಳನ್ನು ಸಂಪೂರ್ಣ ಕೊರೊನಾ ಸೋಂಕಿತರಿಗಾಗಿ ಬಳಸಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ
– ಶರತ್ ಬಿ., ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.