ADVERTISEMENT

ಒಂದೇ ಕೊಠಡಿಯಲ್ಲಿ ಊಟ, ಪಾಠ!

ಯಡ್ರಾಮಿ: ಖಾಸಗಿ ಜಮೀನಿನಲ್ಲಿ ಸರ್ಕಾರಿ ಶಾಲೆ, ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 7:25 IST
Last Updated 17 ಫೆಬ್ರುವರಿ 2020, 7:25 IST
ಯಡ್ರಾಮಿ ತಾಲ್ಲೂಕಿನ ಸೋಮನಾಥಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಯಡ್ರಾಮಿ ತಾಲ್ಲೂಕಿನ ಸೋಮನಾಥಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಯಡ್ರಾಮಿ: ದನದ ಕೊಟ್ಟಿಗೆಯಾಗಿ ಪರಿವರ್ತನೆಯಾಗಿರುವ ಕಟ್ಟಡ, ಉಸಿರುಗಟ್ಟಿಸುವ ವಾತಾವರಣ, ಒಂದೇ ಕೊಠಡಿಯಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಅಲ್ಲಿಯೇ ಬಿಸಿಯೂಟ...

ಇದುಯಡ್ರಾಮಿ ತಾಲ್ಲೂಕಿನ ಸೋಮನಾಥಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.

ಸರ್ಕಾರಿ ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡುತ್ತಿಲ್ಲ ಎಂಬ ದೂರುಗಳಿದ್ದರೂ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದಕ್ಕೆ ಈ ಶಾಲೆಯ ಅವ್ಯವಸ್ಥೆ ಸಾಕ್ಷಿಯಾಗಿದೆ.

ADVERTISEMENT

40 ವರ್ಷದ ಹಿಂದೆ ಈ ಗ್ರಾಮದಲ್ಲಿ ಖಾಸಗಿ ಜಾಗವೊಂದರಲ್ಲಿ ಶಾಲೆಯನ್ನು ನಿರ್ಮಿಸಲಾಗಿತ್ತು.ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 30 ವಿದ್ಯಾರ್ಥಿಗಳು ಓದುತ್ತಾರೆ. 2 ಕೋಣೆಗಳನ್ನು ಹೊಂದಿರುವ ಈ ಶಾಲೆಯಲ್ಲಿ ಈಗ ಒಂದು ಕೊಠಡಿಯಲ್ಲಿ ಪಾಠ, ಪ್ರವಚನ ನಡೆಯುತ್ತವೆ. ಅಲ್ಲಿಯೇ ಮಧ್ಯಾಹ್ನ ಮಕ್ಕಳು ಊಟ ಮಾಡುತ್ತಾರೆ. ಮತ್ತೊಂದು ಕೊಠಡಿಯಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಿಸಲಾಗುತ್ತದೆ!

ಮಕ್ಕಳ ಉತ್ತಮ ಕಲಿಕೆಗೆ ಕನಿಷ್ಠ ಇಲ್ಲಿ 4 ಕೋಣೆಗಳಾದರೂ ಬೇಕಿತ್ತು. ಆದರೆ ಒಂದೇ ಕೊಠಡಿ ಇರುವುದರಿಂದ 5ನೇ ತರಗತಿ ಮಕ್ಕಳು 1ನೇ ತರಗತಿ ಪಾಠಗಳನ್ನು, ಹಾಗೆಯೇ 1ನೇ ತರಗತಿ ಮಕ್ಕಳು 5ನೇ ತರಗತಿ ಪಾಠಗಳನ್ನು ಕೇಳಬೇಕಾದ ಪರಿಸ್ಥಿತಿಯಿದೆ.

ಸರ್ಕಾರಿ ಶಾಲೆಯ ಕೊಠಡಿಯಲ್ಲೇ ಮೇವು ಮತ್ತು ವಸ್ತುಗಳನ್ನು ಇಡಲಾಗಿದೆ. ಖಾಸಗಿ ಜಾಗವಾಗಿರುವುದರಿಂದ ಶಾಲೆ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಾಹೇಬಣ್ಣ ಕವಲದಾರ್ ತಿಳಿಸಿದರು.

‘ಮಲ್ಲಿಕಾರ್ಜುನ ಎಂಬುವವರ ಹೆಸರಿನಲ್ಲಿರುವ ಜಮೀನಿನಲ್ಲಿ ಶಾಲೆಯಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸೌಲಭ್ಯ ಕಲ್ಪಿಸಲು ಮತ್ತು ದುರಸ್ತಿ ಕೈಗೊಳ್ಳಲು ಆಗುತ್ತಿಲ್ಲ. ಈ ಸಮಸ್ಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮುಖ್ಯ ಶಿಕ್ಷಕ ಹರಿಶ್ಚಂದ್ರ ತಿಳಿಸಿದರು.

ಗ್ರಾಮದ ಸರ್ಕಾರಿ ಶಾಲೆಗೆ ಸರ್ಕಾರ ಜಮೀನು ಮಂಜೂರು ಮಾಡಬೇಕು. ಸಕಲ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಕೇವಲ 5ನೇ ತರಗತಿಯವರೆಗೆ ಶಿಕ್ಷಣ ಸಿಗುವುದರಿಂದ ಮಕ್ಕಳುಹೆಚ್ಚಿನ ವಿದ್ಯಾಭ್ಯಾಸಕ್ಕೆ ಯಾಳವಾರ, ಜೇವರ್ಗಿಗೆ ವಿದ್ಯಾರ್ಥಿಗಳು ಹೋಗುತ್ತಾರೆ. ಈ ಗ್ರಾಮದಲ್ಲಿ 150 ಮನೆಗಳಿವೆ. 1000 ಜನಸಂಖ್ಯೆ ಇದೆ. ಆದರೂ ಈ ಗ್ರಾಮಕ್ಕೆ ಈವರೆಗೆ ಬಸ್‌ ಬಂದಿಲ್ಲ.ಬಸ್ ಇಲ್ಲದ ಕಾರಣ ಕಾಲ್ನಡಿಗೆ ಮೂಲಕ ವಿದ್ಯಾರ್ಥಿಗಳ ಹೋಗುವುದು ಸಾಮಾನ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.