ADVERTISEMENT

ಜೇವರ್ಗಿ | ಹರನೂರು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:04 IST
Last Updated 8 ಡಿಸೆಂಬರ್ 2023, 16:04 IST
<div class="paragraphs"><p>ಜೇವರ್ಗಿಯಲ್ಲಿ ₹ 3 ಸಾವಿರ ಲಂಚ ಪಡೆಯುತ್ತಿದ್ದ ಹರನೂರು ಗ್ರಾ.ಪಂ. ಬಿಲ್ ಕಲೆಕ್ಟರ್ ಬಾಬುರಾವ (ಬಲದಿಂದ ಎರಡನೇಯವರು) ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು</p></div>

ಜೇವರ್ಗಿಯಲ್ಲಿ ₹ 3 ಸಾವಿರ ಲಂಚ ಪಡೆಯುತ್ತಿದ್ದ ಹರನೂರು ಗ್ರಾ.ಪಂ. ಬಿಲ್ ಕಲೆಕ್ಟರ್ ಬಾಬುರಾವ (ಬಲದಿಂದ ಎರಡನೇಯವರು) ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು

   

ಕಲಬುರಗಿ: ಬಸವ ವಸತಿ ಯೋಜನೆಯಡಿ ಫಲಾನುಭವಿಯೊಬ್ಬರ ಮನೆಯ ಜಿಪಿಎಸ್ ಮಾಡಿ ಬಾಕಿ ಹಣವನ್ನು ಬಿಡುಗಡೆ ಮಾಡಿಸಲು ₹ 3 ಸಾವಿರ ಲಂಚ ಪಡೆಯುತ್ತಿದ್ದ ಜೇವರ್ಗಿ ತಾಲ್ಲೂಕಿನ ಹರನೂರು ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಬಾಬುರಾವ ಯಲಗೂರದಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗ್ರಾಮದ ಈರಮ್ಮ ಅಯ್ಯಣ್ಣ ಮಡಿವಾಳ ಎಂಬುವವರಿಗೆ ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುದಾನ ಮಂಜೂರಾಗಿತ್ತು. ಕೊನೆಯ ಕಂತು ₹ 30 ಸಾವಿರ ಬಾಕಿ ಇತ್ತು. ಇದಕ್ಕೆ ಜಿಪಿಎಸ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಡುವುದಾಗಿ ಬಿಲ್ ಕಲೆಕ್ಟರ್ ಬಾಬುರಾವ ಹೇಳಿದ್ದ. ಇದಕ್ಕೆ ಪ್ರತಿಯಾಗಿ ₹ 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತು ಈರಮ್ಮ ಅವರು ತಮ್ಮ ಪರಿಚಯದ ನಾಗನಗೌಡ ಮಾಲಿಪಾಟೀಲ ಅವರ ಬಳಿ ಅಳಲು ತೋಡಿಕೊಂಡಿದ್ದರು. ಈ ಕುರಿತು ನಾಗನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಜೇವರ್ಗಿ ಪಟ್ಟಣದ ಎಪಿಎಂಸಿ ಬಳಿಯ ನರಿಬೋಳ ಕ್ರಾಸ್‌ನಲ್ಲಿ ನಾಗನಗೌಡ ಅವರು ಹಣ ನೀಡುವುದಾಗಿ ಈರಮ್ಮ ಬಾಬುರಾವಗೆ ತಿಳಿಸಿದ್ದರು. ಅದರಂತೆ ಲಂಚದ ಹಣವನ್ನು ತಲುಪಿಸುವಷ್ಟರಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ನಾನಾಗೌಡ ಪಾಟೀಲ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿತು.

ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್, ಡಿವೈಎಸ್ಪಿ ಗೀತಾ ಬೇನಾಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಯಾದ ಹಣಮಂತರಾಯ ಹತ್ತಿ, ಮಸೂದ್ ಎಚ್.ಸಿ. ಶರಣಬಸವ, ಮಲ್ಲಿನಾಥ, ಅನಿಲ್, ಕನ್ಹಯ್ಯ ತಿವಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.