ADVERTISEMENT

ಕವನಳ್ಳಿಗಿಲ್ಲ ಸೂಕ್ತ ಸಂಪರ್ಕ ರಸ್ತೆ

35 ಮನೆ, 100 ಜನ ವಾಸ: ಮೂಲ ಸೌಕರ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:11 IST
Last Updated 3 ಡಿಸೆಂಬರ್ 2019, 12:11 IST
ಕಮಲಾಪುರ ತಾಲ್ಲೂಕಿನ ಕವನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ಕಮಲಾಪುರ ತಾಲ್ಲೂಕಿನ ಕವನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ   

ಕಮಲಾಪುರ (ಕಲಬುರ್ಗಿ ಜಿಲ್ಲೆ): ಈ ಗ್ರಾಮದಲ್ಲಿ ಸರಿಯಾದ ರಸ್ತೆಯೇ ಇಲ್ಲ. ಸಂಚಾರ ಸಮಸ್ಯೆಯಿಂದ ಇಲ್ಲಿನ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸವೂ ಸಿಗುತ್ತಿಲ್ಲ. ಇದರಿಂದ ಬೇಸತ್ತು ಹೋಗಿರುವ ಗ್ರಾಮಸ್ಥರು ಈ ಊರನ್ನೇ ತೊರೆದು ಪಟ್ಟಣಗಳಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕವನಳ್ಳಿ ಗ್ರಾಮದ ದುಸ್ಥಿತಿ ಇದು. ಇಲ್ಲಿ ಅಭಿವೃದ್ಧಿ ಎಂಬುದೇ ಕಾಣದಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಗ್ರಾಮಕ್ಕೆ ಇದುವರೆಗೂ ರಸ್ತೆಯನ್ನೇ ನಿರ್ಮಿಸಿಲ್ಲ.

ಕಮಲಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮ ಗುಡ್ಡಗಾಡಿನಲ್ಲಿದೆ. ಚಕ್ಕಡಿ ಗಾಡಿಗಳು ಓಡಾಡಲು ಇರೋ ಸಣ್ಣ ರಸ್ತೆ ಮಳೆಯಾದರೂ ಕೆಸರು ಗದ್ದೆಯಂತಾಗುತ್ತದೆ.

ADVERTISEMENT

ಕಲಮೂಡವರೆಗೆ ಕಾಲ್ನಡಿಗೆಯಲ್ಲೇ ಸಾಗಬೇಕು. ಜನ ವಸತಿಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲಿಲ್ಲ. ಇದರಿಂದ ಬೇಸತ್ತ ಅನೇಕ ಕುಟುಂಬಗಳು ಕಮಲಾಪುರ, ಕಲಬುರ್ಗಿ, ಸೇರಿದಂತೆ ಬೇರೆ ನಗರಗಳಲ್ಲಿ ವಾಸ ಕಂಡುಕೊಂಡಿದ್ದಾರೆ. ಪ್ರತಿ ವರ್ಷ ಜನಸಂಖ್ಯೆ ಕ್ಷೀಣಿಸುತ್ತಿದೆ. ಸದ್ಯ ಗ್ರಾಮದಲ್ಲಿ ಕೇವಲ 35 ಮನೆಗಳಿವೆ. ಹೆಚ್ಚೆಂದರೆ 100 ಜನ ಮಾತ್ರ ಸಿಗುತ್ತಾರೆ.

ಗ್ರಾಮದಲ್ಲಿ 5ನೇ ತರಗತಿವರೆಗೆ ಶಾಲೆಯಿದೆ. ಸಂಚಾರ ಸಮಸ್ಯೆಯಿಂದ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗುತ್ತಿಲ್ಲ.ರಸ್ತೆ ಇಲ್ಲದೆ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅನಾರೋಗ್ಯ, ಹೆರಿಗೆ, ಅವಘಡ ಸಂಭವಿಸಿದರೆ ಆಸ್ಪತ್ರೆಗೆ ಸಾಗಿಸುವುದೇ ದೊಡ್ಡ ಸಮಸ್ಯೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮದಲ್ಲಿ ನಸರೋದ್ದಿನ್‌ ಷಾ ದರ್ಗಾ ಇದೆ. ಪ್ರತಿ ಅಮವಾಸ್ಯೆಗೆ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಆದರೆ ಗ್ರಾಮದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ. ಕುಡಿಯುವ ನೀರಿಗೂ ಸಂಕಷ್ಟ ಪಡಬೇಕಾಗಿದೆ. ‘ಗ್ರಾಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ, ನಮ್ಮ ಸಮಸ್ಯೆ ಆಲಿಸುತ್ತಿಲ್ಲ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.