ADVERTISEMENT

‘ಕೆಕೆಆರ್‌ಡಿಬಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಅನುದಾನ’

ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 13:40 IST
Last Updated 17 ಸೆಪ್ಟೆಂಬರ್ 2022, 13:40 IST
ರಾಯಚೂರಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಅಮೃತೋತ್ಸವ ನಿಮಿತ್ತ ಭಾವಚಿತ್ರಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಿದರು.
ರಾಯಚೂರಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಅಮೃತೋತ್ಸವ ನಿಮಿತ್ತ ಭಾವಚಿತ್ರಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಸಿದರು.   

ರಾಯಚೂರು: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಆನಂತರ ಮಾತನಾಡಿದ ಅವರು, ಹೈದರಾಬಾದ್‌ ಕರ್ನಾಟಕ ಎಂದು ಕರೆಯುತ್ತಿದ್ದ ಈ ಭಾಗವನ್ನು 2019 ರಲ್ಲಿ ಮರುನಾಮಕರಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೊಸ ಹೆಸರಿನೊಂದಿಗೆ ಈ ಭಾಗದ ಅಭಿವೃದ್ಧಿ್ಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರವು ಶಕ್ತಿ ತುಂಬಿದೆ ಎಂದರು.

ಕೆಕೆಆರ್‌ಡಿಯಿಂದ ಇದುವರೆಗೂ ರಾಯಚೂರು ಜಿಲ್ಲೆಗೆ ₹1,679 ಕೋಟಿ ಅನುದಾನ ಬಿಡುಗಡೆಯಾಗಿದೆ. 2019 ರಿಂದ ಇದುವರೆಗೂ ₹898 ಕೋಟಿ ಮಂಜೂರಿಯಾಗಿದೆ. ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ₹185.57 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 315 ಎಕರೆ ಜಮೀನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಈ ಭಾಗವನ್ನು ವಿಮೋಚನೆಗೊಳಿಸಲು ಅನೇಕ ಮಹನೀಯರು ಹೋರಾಡಿದ್ದಾರೆ. ಅವರೆಲ್ಲರ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂ.ನಾಗಪ್ಪ, ಡಾ.ಬಿ.ಜಿ.ದೇಶಪಾಂಡೆ, ಜನಾರ್ದನರಾವ್‌ ದೇಸಾಯಿ, ಗುಡಿಹಾಳ ಹನುಮಂತರಾವ್‌, ರಾಮಾಚಾರ ಜೋಷಿ, ಎಲ್‌.ಕೆ.ಸರಾಫ್‌, ಗಾಣದಾಳ ನಾರಾಯಣಪ್ಪ, ಕಸಬೆ ಪಾಂಡುರಂಗರಾವ್‌, ಜಿ.ಮಧ್ವರಾಯ ಸೇರಿದಂತೆ ಸಹಸ್ರಾರು ಹೋರಾಟಗಾರರ ತ್ಯಾಗದಿಂದ ಈ ಭಾಗವು ಸ್ವತಂತ್ರಗೊಂಡಿದೆ ಎಂದು ಹೇಳಿದರು.

ವಿವಿಧ ಇಲಾಖೆಗಳಡಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜಲಧಾರೆ ಮತ್ತು ಜಲಜೀವನ್‌ ಮಿಷನ್‌ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರವು ₹2,290 ಕೋಟಿ ಅನುದಾನ ಮಂಜೂರಿ ಮಾಡಿದೆ. ಈಗಾಗಲೇ ₹108 ಕೊಟಿ ಅನುದಾನ ಬಳಕೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇದುವರೆಗೂ 70 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದೆ. ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಇದುವರೆಗೂ 1,26,704 ಫಲಾನುಭವಿಗಳಿಗೆ ಬಾಂಡ್‌ ನೀಡಲಾಗಿದೆ ಎಂದರು.

ಮಾತೃಪೂರ್ಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 24,209 ಗರ್ಭಿಣಿಯರಿಗೆ ಮತ್ತು 2,13,932 ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯಡಿ ಒಟ್ಟು 14 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, 975 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಮೊರಾರ್ಜಿ ಏಳು ವಸತಿ ಶಾಲೆಗಳಲ್ಲಿ 2,360 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌, ಗೃಹರಕ್ಷಕ ದಳ ಸೇರಿದಂತೆ ವಿವಿಧ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಜಿಲ್ಲೆಯ ನೀರಲಕೇರಿ, ಹೀರಾ, ಆರ್‌.ಎಚ್‌.ಕ್ಯಾಂಪ್‌, ಚಿಕ್ಕಸುಗೂರು, ಅರಕೇರಾ, ಮಾರಲದಿನ್ನಿ ಗ್ರಾಮ ಪಂಚಾಯಿತಿಗಳಿಗೆ ಉತ್ತಮ ಸಾಧನೆ ಪ್ರಶಸ್ತಿ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‌ ಕುರೇರ, ಉಪವಿಭಾಗಾಧಿಕಾರಿ ರಜನಿಕಾಂತ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಆಶಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.