ADVERTISEMENT

ಕಲಬುರಗಿ | ಅಂಗನವಾಡಿ ನಿವೃತ್ತ ನೌಕರರಿಗೂ ಗ್ರಾಚ್ಯುಟಿ ನೀಡಿ: ಸಿಎಂಗೆ ಮನವಿ

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:22 IST
Last Updated 30 ಅಕ್ಟೋಬರ್ 2025, 5:22 IST
ಕಲಬುರಗಿಯಲ್ಲಿ ಅಂಗನವಾಡಿ ನೌಕರರ ಸಂಘದಿಂದ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ ಪ್ರೇಮಾ ಅವರಿಗೆ ಸಲ್ಲಿಸಲಾಯಿತು
ಕಲಬುರಗಿಯಲ್ಲಿ ಅಂಗನವಾಡಿ ನೌಕರರ ಸಂಘದಿಂದ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ ಪ್ರೇಮಾ ಅವರಿಗೆ ಸಲ್ಲಿಸಲಾಯಿತು   

ಕಲಬುರಗಿ: 2011ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೂ ಸುಪ್ರೀಂ ಕೋರ್ಟ್ ತೀರ್ಪಿನಂತೆ ಗ್ರಾಚ್ಯುಟಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದ ಉದನೂರ ರಸ್ತೆ ಸಮೀಪದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಗ್ರಾಮೀಣ ಕಚೇರಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಗೌರಮ್ಮ ಪಾಟೀಲ ಮಾತನಾಡಿ, ‘1975ರ ಅ.2ರಂದು ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಂದು ಶಿಶುವಿನಂತೆ ಇತ್ತು. ಇಂದು ಈ ಯೋಜನೆ ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಮಾನವ ಸಂಪನ್ಮೂಲ ಬೆಳವಣಿಗೆ ಖಾತ್ರಿಪಡಿಸುವ ಈ ಯೋಜನೆಯ ಅಭಿವೃದ್ಧಿಗೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿದಿದ್ದಾರೆ’ ಎಂದರು.

‘2022ರ ಏ.25ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲ ಕಾರ್ಯಕರ್ತರು ಮತ್ತು ಸಹಾಯಕರಿಗೆ ಕಾಯ್ದೆ 1972ರ ನಿಬಂಧನೆಗಳು ಅನ್ವಯವಾಗುತ್ತವೆ ಎಂದು ಹೇಳಿದೆ. ಈ ತೀರ್ಪಿನ ಅನುಷ್ಠಾನಕ್ಕಾಗಿ 2023ರ ಜನವರಿಯಲ್ಲಿ ನಡೆದ ಚಳವಳಿಯ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023ರ ಏಪ್ರಿಲ್‌ನಿಂದ ಗ್ರಾಚ್ಯುಟಿ ಜಾರಿಗೊಳಿಸಿದೆ. ಆದರೆ ಈ ಆದೇಶವು 2011ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ 10,311 ಕಾರ್ಯಕರ್ತೆಯರು ಹಾಗೂ 11,980 ಸಹಾಯಕಿಯರಿಗೆ ಅನ್ವಯಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ₹183 ಕೋಟಿ ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿದೆ’ ಎಂದು ದೂರಿದರು.

ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಿಡಿಪಿಒ ಪ್ರೇಮಾ ಅವರಿಗೆ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ., ಖಜಾಂಚಿ ಗೋರಬಿ, ಶರಣಮ್ಮ ಖನ್ನಾ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.