ADVERTISEMENT

ವ್ಯಾಪಾರಿಗಳಿಗೆ ಕರ್ಕಶವಾದ ‘ಹಸಿರು ಪಟಾಕಿ’

ಸರ್ಕಾರದ ಆದೇಶಕ್ಕೆ ಮಾರಾಟಗಾರರು ಕಂಗಾಲು, ಜಿಲ್ಲಾಡಳಿತದಿಂದ ಸಹಕಾರದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 15:13 IST
Last Updated 10 ನವೆಂಬರ್ 2020, 15:13 IST
ಕಲಬುರ್ಗಿ ನಗರದ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಿರುವ ವ್ಯಾಪಾರಿಗಳು ಸರ್ಕಾರದ ಹೊಸ ಆದೇಶದ ಮಾರ್ಗಸೂಚಿಗಳ ಬಗ್ಗೆ ಮಂಗಳವಾರ ಸಭೆ ನಡೆಸಿದರು
ಕಲಬುರ್ಗಿ ನಗರದ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಿರುವ ವ್ಯಾಪಾರಿಗಳು ಸರ್ಕಾರದ ಹೊಸ ಆದೇಶದ ಮಾರ್ಗಸೂಚಿಗಳ ಬಗ್ಗೆ ಮಂಗಳವಾರ ಸಭೆ ನಡೆಸಿದರು   

ಕಲಬುರ್ಗಿ: ರಾಜ್ಯ ಸರ್ಕಾರ ಸಿಡಿಸಿದ ‘ಹಸಿರು ಪಟಾಕಿ’ ಈಗ ಪಟಾಕಿ ವ್ಯಾಪಾರಿಗಳಿಗೇ ಕರ್ಕಶವಾಗಿದೆ. ಈ ಬಾರಿ ಕೊರೊನಾ ವೈರಾಣು ಉಪಟಳ ಹೆಚ್ಚಾದ ಕಾರಣ, ಪಟಾಕಿ ವ್ಯಾಪಾರವನ್ನೇ ಮಾಡಬಾರದು ಎಂದು ಬಹುಪಾಲು ವರ್ತಕರು ನಿರ್ಧರಿಸಿದ್ದರು. ಆದರೆ, ರಾಜ್ಯ ಸರ್ಕಾರ ತೋರಿಸಿದ ‘ಆಸೆ’ಯಿಂದ ಪಟಾಕಿ ಮಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆ ಘಳಿಗೆಯಲ್ಲಿ ಸರ್ಕಾರವೇ ‘ಹಸಿರು’ ಕಟ್ಟಳೆ ಹಾಕಿದ್ದು ಗೊಂದಲಕ್ಕೆ ತಳ್ಳಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅಕ್ಟೋಬರ್‌ 14ರಂದು ಹೊರಡಿಸಿದ ಆದೇಶವು ಪಟಾಕಿ ವ್ಯಾಪಾರಿಗಳಲ್ಲಿ ಆದಾಯದ ಆಸೆ ಮೂಡಿಸಿತು. ಇದಕ್ಕಾಗಿ ಕೆಲವರು ಚಿನ್ನ ಅಡವಿಟ್ಟು, ಇನ್ನು ಕೆಲವರು ಸಾಲ ಮಾಡಿ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಸರಕು ಖರೀದಿಗೆ ಮುಂಗಡ ಪಾವತಿ ಮಾಡಿದ್ದಾರೆ. ಆದರೆ, ನವೆಂಬರ್‌ 6ರಂದು ಮುಖ್ಯಮಂತ್ರಿ ‘ಹಸಿರು ಪಟಾಕಿ’ ಮಾತ್ರ ಮಾರಾಟ ಮಾಡಬೇಕೆಂಬ ಷರತ್ತು ಹಾಕಿದರು. ಲಾಕ್‌ಡೌನ್‌ನಿಂದ ಕೈ ಸುಟ್ಟುಕೊಂಡ ವ್ಯಾಪಾರಿಗಳು ಈಗ ಪಟಾಕಿ ಸದ್ದಿಗೆ ಮತ್ತೆ ಠುಸ್‌ ಆಗಿದ್ದಾರೆ.

ನಗರದ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಸುರಕ್ಷಿತ ಅಂತರದೊಂದಿಗೆ ಪಟಾಕಿ ಮಾರಾಟದ 34 ಮಳಿಗೆಗಳನ್ನು ಹಾಕಲಾಗಿದೆ. ಲೈಟಿಂಗ್‌, ಜನರೇಟರ್‌ ವ್ಯವಸ್ಥೆ ಮಾಡಲಾಗಿದೆ. ಮಳಿಗೆ ಸ್ಥಾಪನೆ ಪರವಾನಗಿಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌ ಆಯುಕ್ತರ ಕಚೇರಿ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ಸಂಬಂಧಪಟ್ಟ ಪೊಲೀಸ್‌ ಠಾಣೆ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ವ್ಯಾಪಾರಿಗಳು ಎಡತಾಕಿದ್ದಾರೆ.

ADVERTISEMENT

ಈಗಾಗಲೇ ವಹಿವಾಟು ಆರಂಭವಾಗಿದ್ದರೆ ತಕ್ಕಮಟ್ಟಿಗೆ ಆದಾಯ ಬರುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹೊಸ ಆದೇಶ ಹೊರಡಿಸಿದ್ದರಿಂದ ಹಾಕಿದ ಬಂಡವಾಳವೂ ಬರದಂತಾಗಿದೆ. ವ್ಯಾಪಾರ ಮಾಡಲು ಉಳಿದಿದ್ದು, ಕೇವಲ ಐದಾರು ದಿನಗಳು ಮಾತ್ರ ಎಂಬುದು ವ್ಯಾಪಾರಿಗಳು ಅಳಲು.

ಜಿಎಸ್‌ಟಿ ಏಕೆ ಕಟ್ಟಿಸಿಕೊಂಡರು?:

ಪ್ರತಿ ವಸ್ತು ಖರೀದಿಗೆ ಜಿಎಸ್‌ಟಿ ಖಡ್ಡಾಯವಾಗಿದೆ. ನಾವು ಪಟಾಕಿ ಸರಕು ಖರೀದಿ ಮಾಡಿದಾಗ ಸರ್ಕಾರ ಯಾವ ಜಿಎಸ್‌ಟಿ ಕಟ್ಟಿಸಿಕೊಂಡಿದೆ. ಆಗ ಹಸಿರು ಪಟಾಕಿ ಯಾವುದು; ಸಾಮಾನ್ಯ ಪಟಾಕಿ ಯಾವುದು ಎಂಬುದು ಗೊತ್ತಿರಲಿಲ್ಲವೇ? ನಮ್ಮ ಸರಕಿನ ಮೇಲೆ ಜಿಎಸ್‌ಟಿ ಪಡೆದ ಮೇಲೆ ನಂತರದಲ್ಲಿ ಮಾರಾಟಕ್ಕೆ ಷರತ್ತು ವಿಧಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದೂ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘2018ರಲ್ಲಿ ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶದಂತೆ ಶಿವಕಾಶಿಯಲ್ಲಿನ ಸುಮಾರು 250 ಕಂಪನಿಗಳು ಹಸಿರು ಪಟಾಕಿಯನ್ನೇ ತಯಾರಿಸುತ್ತವೆ. ಅಲ್ಲಿಂದಲೇ ನಾವು ಪಟಾಕಿ ಸರಕು ತರಿಸಿಕೊಂಡಿದ್ದೇವೆ. ಪರವಾನಗಿ ಸಿಗದ ಕಾರಣ ಲಾರಿಯಲ್ಲಿ ಸರಕು ಹಾಗೆ ನಿಂತಿದೆ. ದಿನಗಳೆದಂತೆ ವ್ಯಾಪಾರಿಗಳ ಆತಂಕ ಹೆಚ್ಚುತ್ತಿದೆ. ಪರವಾನಗಿ ಸಿಗದಿದ್ದರೆ ವ್ಯಾಪಾರಿಗಳ ಸಂಸಾರಗಳು ಬೀದಿಪಾಲಾಗುತ್ತವೆ’ ಎಂದು ವ್ಯಾಪಾರಿ ಚನ್ನವೀರ ಲಿಂಗನವಾಡಿ ತಿಳಿಸಿದರು.

‘ಪಟಾಕಿ ಮಾರಾಟ ಮಾಡಲು ಮೂರು ತಿಂಗಳು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲಿ ಯಾರೂ ದೊಡ್ಡ ಉದ್ಯಮಿಗಳಲ್ಲ. ಸಾಲ ಮಾಡಿ ಪಟಾಕಿ ಸರಕು ತರಿಸುತ್ತಿದ್ದಾರೆ. ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಿದರೆ ವ್ಯಾಪಾರಿಗಳಿಗೆ ಉಳಿಗಾಲವಿದೆ’ ಎಂದು ಹಿರಿಯ ವ್ಯಾಪಾರಿ ಗೌರಿಶಂಕರ ಕಂದೂರ ಹೇಳುತ್ತಾರೆ.

ಏನಿದು ಹಸಿರು ಪಟಾಕಿ?

ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿಗಳ ವ್ಯತ್ಯಾಸದ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲವಿದೆ. ಇದನ್ನು ಬಣ್ಣದಿಂದ ಗುರುತಿಸುವುದಿಲ್ಲ. ಹಸಿರು ಪಟಾಕಿ ಎಂದರೆ ಕಡಿಮೆ ಹೊಗೆ ಉಗುಳುವ ಮತ್ತು ಕಡಿಮೆ ಶಬ್ದ ಮಾಡುವ ಪಟಾಕಿಗಳಾಗಿವೆ. ಇವುಗಳಲ್ಲಿ ನಿಷೇಧಿತ ಹಾನಿಕಾರಕ ಅಂಶಗಳು ಇರುವುದಿಲ್ಲ. ಈ ಕಾರಣ ಇವುಗಳನ್ನು ಪರಿಸರ ಸ್ನೇಹಿ ಅಥವಾ ಹಸಿರು ಪಟಾಕಿ ಎನ್ನಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.