ADVERTISEMENT

ಗ್ಯಾರಂಟಿ ಯೋಜನೆ: ನುಡಿದಂತೆ ನಡೆದಿದ್ದೇವೆ: ಅಜಯ್ ಸಿಂಗ್‌

ವಿಮಾನ ನಿಲ್ದಾಣದಲ್ಲಿ ಶಾಸಕ ಡಾ. ಅಜಯ್ ಸಿಂಗ್‌ಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 16:21 IST
Last Updated 3 ಜೂನ್ 2023, 16:21 IST
ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಸ್ವಾಗತಿಸಿದರು
ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಸ್ವಾಗತಿಸಿದರು   

ಕಲಬುರಗಿ: ‘‌ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ’ ಎಂದು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ತಿಳಿಸಿದರು.

ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ಬಳಿಕ ಶನಿವಾರ ನಗರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಬಿಜೆಪಿ ಆಡಳಿತ ನಡೆಸಿ ಬೆಲೆ ಏರಿಕೆ ಮಾಡುವ ಜನರ ಜೀವನ ದುರ್ಬರಗೊಳಿಸಿದ್ದರಿಂದಲೇ ಇಂತಹ ಗ್ಯಾರಂಟಿ ಯೋಜನೆಗಳನ್ನು ತರಬೇಕಾಯಿತು. ಬಿಜೆಪಿ ಗ್ಯಾರಂಟಿ ಯೋಜನೆಗಳ ಬಗ್ಗೆ ಕೊಂಕು ಮಾತುಗಳನ್ನಾಡಿರುವುದು ಅವರ ಹೊಣೆಗೇಡಿತನವನ್ನು ತೋರಿಸಿ ಕೊಡುತ್ತದೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಣಕಾಸು ಖಾತೆಯಲ್ಲಿ ನಿರ್ವಹಿಸಿ, 14 ಬಜೆಟ್ ಮಂಡನೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಾಣರಿದ್ದು, ಎಲ್ಲ ಸಾಧಕ ಬಾಧಕಗಳನ್ನು ಯೋಚನೆ ಮಾಡಿಯೇ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರವು ಜಿಎಸ್‌ಟಿ ಹಣ ಮರುಪಾತಿಸುತ್ತಿಲ್ಲದಿದ್ದರೂ ಇಂತಹ ದೊಡ್ಡ ಐದು ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಸ್ವಾಗತಿಸುವುದು ಬಿಟ್ಟು ಇಲ್ಲದ ಮಾತನಾಡುವುದು ಸರಿಯಲ್ಲ’ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸಿ ಎಲ್ಲ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಜನರ ಜೀವನ ಸಾಗಿಸುವುದು ಕಷ್ಟವಾಗಿಸಿತು. ಅಡುಗೆ ಸಿಲಿಂಡರ್ ಬೆಲೆ ₹ 460 ಇದ್ದುದನ್ನು ₹ 1150ಕ್ಕೆ ಏರಿಸಿದರು. ಹೀಗಾಗಿ ಮನೆಯ ಯಜಮಾನಿ ಸಂಸಾರ ನಡೆಸಲು ಪರಾಡುವಂತಿದ್ದನ್ನು ಅರಿತುಕೊಂಡು ನಾವು ಅವರಿಗೆ ಮಾಸಿಕ ₹ 2 ಸಾವಿರ ನೀಡಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೇವೆ’ ಎಂದು ಹೇಳಿದರು.

ಡಾ.ಅಜಯ್ ಸಿಂಗ್ ಅವರು ಮೊದಲ ಸಲ ಕಲಬುರಗಿಗೆ ಆಗಮಿಸಿದ ನಿಮಿತ್ತವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೃಹತ್ ಹೂಮಾಲೆ ಹಾಕಿ, ಪುಷ್ಪವೃಷ್ಟಿ ಮಾಡಿದರು. ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವವರೆಗೂ ಅಲ್ಲಲ್ಲಿ ವಾಹನ ತಡೆದು ಹೂಮಾಲೆ ಹಾಕಿದರು.

ಮುಖಂಡರಾದ ರಾಜು ಭೀಮಳ್ಳಿ, ಬಸವರಾಜ ಬಿರಾದಾರ ಸೊನ್ನ, ರಾಜಶೇಖರ ಸೀರಿ, ನೀಲಕಂಠ ಅವಟಿ, ನೀಲಕಂಠ ಮೂಲಗೆ, ಉದಯಕುಮಾರ ಚಿಂಚೋಳಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಕಲ್ಯಾಣರಾವ ಪಾಟೀಲ, ಗುರುಲಿಂಗಪ್ಪಗೌಡ ಆಂದೋಲಾ, ವಿಜಯಕುಮಾರ ಪಾಟೀಲ ಹಂಗರಗಿ, ಸಕ್ರೆಪ್ಪಗೌಡ ಪಾಟೀಲ ಹರನೂರ, ನಾರಾಯಣರಾವ ಕಾಳೆ, ಸಿ.ಎ. ಪಾಟೀಲ್, ಕಾಶಿರಾಯಗೌಡ ಯಲಗೋಡ, ಸಂಜೀವ ಐರಡ್ಡಿ, ರಹೀಂಖಾನ್ ಪಠಾಣ, ಶರಣು ಭೂಸನೂರ, ವಿಜಯಕುಮಾರ ಸೊನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.