ADVERTISEMENT

ಅಡಕತ್ತರಿಯಲ್ಲಿ ಅತಿಥಿ ಉಪನ್ಯಾಸಕರ ಬದುಕು

ಒಂದು ವರ್ಷದಿಂದ ಆದಾಯವಿಲ್ಲದೇ ಮನೆ ನಡೆಸುವುದೂ ದುರ್ಲಭ; ಗೌಂಡಿ ಕೆಲಸಕ್ಕೆ ಹೊರಟ ಶಿಕ್ಷಕರು

ಮನೋಜ ಕುಮಾರ್ ಗುದ್ದಿ
Published 13 ಮೇ 2021, 8:58 IST
Last Updated 13 ಮೇ 2021, 8:58 IST
ಆರ್‌.ಕೆ. ವೀರಭದ್ರಪ್ಪ
ಆರ್‌.ಕೆ. ವೀರಭದ್ರಪ್ಪ   

ಕಲಬುರ್ಗಿ: ಕಳೆದ ವರ್ಷದ ಮಾರ್ಚ್‌ನಲ್ಲಿ ಘೋಷಣೆಯಾದ ಮೊದಲ ಲಾಕ್‌ಡೌನ್‌ನಿಂದ ಪಾತಾಳಕ್ಕಿಳಿಯಲಾರಂಭಿಸಿದ ಅತಿಥಿ ಉಪನ್ಯಾಸಕರ ಬದುಕು ಎರಡನೇ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಇನ್ನಷ್ಟು ಪ್ರಪಾತಕ್ಕೆ ಇಳಿದಿದೆ.

ಖಾಸಗಿ ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜಿನಲ್ಲಿ ₹ 5 ಸಾವಿರದಿಂದ ₹ 15 ಸಾವಿರದವರೆಗೆ ವೇತನ ಪಡೆಯುತ್ತಿದ್ದವರು ಈಗ ಮನೆ ನಡೆಸಲೂ ಆಗದ ಸ್ಥಿತಿಗೆ ತಲುಪಿದ್ದಾರೆ. ಸರ್ಕಾರ ಇದೇ ಮಾರ್ಚ್‌, ಏಪ್ರಿಲ್‌ನಲ್ಲಿ ಸರ್ಕಾರಿ ಪದವಿ ಹಾಗೂ ಪಿ.ಯು. ಕಾಲೇಜಿಗೆ ಕೆಲವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿದೆಯಾದರೂ ಅವರಿಗೆ ಇನ್ನೂ ವೇತನ ಪಾವತಿಯಾಗಿಲ್ಲ. ಪದವಿ ಕಾಲೇಜಿನ ಕಾಯಂ ಉಪನ್ಯಾಸಕರಿಗೇ ಬಜೆಟ್ ಇಲ್ಲದ್ದಕ್ಕೆ ವೇತನ ಕೊಡಲು ಆಗಿಲ್ಲ. ಇನ್ನು ಅತಿಥಿ ಉಪನ್ಯಾಸಕರಿಗೆ ಎಲ್ಲಿಂದ ತರುವುದು ಎಂದು ಇಲಾಖೆ ಅಧಿಕಾರಿಗಳು ಹೇಳಿ ಸಾಗ ಹಾಕುತ್ತಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ 250 ಪ್ರೌಢಶಾಲೆಗಳು, 40 ಪಿಯು ಕಾಲೇಜು ಹಾಗೂ 10ಕ್ಕೂ ಅಧಿಕ ಪ್ರಥಮ ದರ್ಜೆ ಕಾಲೇಜುಗಳಿವೆ. ಪ್ರಾಥಮಿಕ ಶಾಲೆಗಳೂ ಸೇರಿದಂತೆ ಒಟ್ಟು ಎರಡು ಸಾವಿರ ಅತಿಥಿ ಶಿಕ್ಷಕರು, ಉಪನ್ಯಾಸಕರು ಪಾಠ ಪ್ರವಚನ ಮಾಡುತ್ತಿದ್ದರು. ಆದರೆ, ಕಳೆದ ವರ್ಷ ಶುರುವಾದ ಕೊರೊನಾ ಸೋಂಕು ಇವರ ಬದುಕಿಗೆ ಕೊಳ್ಳಿ ಇಟ್ಟಿದೆ.

ADVERTISEMENT

ಟ್ಯಾಕ್ಸಿ, ಆಟೊ, ಕಟ್ಟಡ ಕಾರ್ಮಿಕರು ಹಾಗೂ ಇತರ ಕೆಲ ಶ್ರಮಿಕ ಸಮುದಾಯದವರಿಗೆ ರಾಜ್ಯ ಸರ್ಕಾರ ಕಳೆದ ಬಾರಿ ಒಂದಿಷ್ಟು ದವಸ ಧಾನ್ಯ, ಹಣಕಾಸು ಪ್ಯಾಕೇಜ್ ಪ್ರಕಟಿಸಿತ್ತು. ಆದರೆ, ಬೋಧನೆಯೊಂದನ್ನೇ ನಂಬಿಕೊಂಡಿರುವ ಅತಿಥಿ ಉಪನ್ಯಾಸಕರಿಗೆ ನಯಾಪೈಸೆ ಸಹಾಯವನ್ನೂ ಮಾಡಿಲ್ಲ ಎಂಬ ಆಕ್ರೋಶ ಇವರಲ್ಲಿ ಮಡುಗಟ್ಟಿದೆ. ಆದರೆ, ಸೋಂಕಿನ ತೀವ್ರತೆ ಹೆಚ್ಚಾಗಿರುವುದರಿಂದ ಹಾಗೂ ಕಳೆದ 20 ದಿನಗಳಿಂದ ಲಾಕ್‌ಡೌನ್‌ ಶುರುವಾಗಿರುವುದರಿಂದ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ.

ಗೌಂಡಿ ಕೆಲಸ: ಅತಿಥಿ ಉಪನ್ಯಾಸಕ ವೃತ್ತಿ ನಂಬಿಕೊಂಡರೆ ತಮ್ಮನ್ನೇ ನಂಬಿಕೊಂಡವರಿಗೆ ಅನ್ನ ಹಾಕುವುದು ಹೇಗೆ ಎಂಬ ಚಿಂತೆಯಿಂದಾಗಿ ಕೆಲ ಅತಿಥಿ ಉಪನ್ಯಾಸಕರು ತಾವು ಡಿ.ಇಡಿ, ಬಿ.ಇಡಿ, ಎಂ.ಎ. ದಂತಹ ಉನ್ನತ ಶಿಕ್ಷಣ ಪಡೆದಿದ್ದೇವೆ ಎಂಬುದನ್ನೂ ಮರೆತು ಕಟ್ಟಡ ಕೆಲಸಗಳಿಗೆ ಗೌಂಡಿಗಳಾಗಿ ಕೆಲಸ ಮಾಡಲು ಹೋಗಿದ್ದಾರೆ. ಇನ್ನು ಕೆಲವರು ಬೀದಿ ಬೀದಿ ಅಲೆದು ತರಕಾರಿ ಮಾರಿದ್ದಾರೆ. ಮತ್ತೆ ಕೆಲವರು ಈ ವೃತ್ತಿಯೇ ಬೇಡ ಎಂದು ನಿರ್ಧರಿಸಿ ಕಿರಾಣಿ ಅಂಗಡಿ, ಫೋಟೊ ಸ್ಟುಡಿಯೊದಂತಹ ವೃತ್ತಿಗಳನ್ನು ಆರಂಭಿಸಿದ್ದಾರೆ. ಆದರೆ, ಇಲ್ಲಿಯೂ ಬೇಡಿಕೆ ಕಡಿಮೆಯಾಗಿರುವುದರಿಂದ ಮಳಿಗೆಯ ಬಾಡಿಗೆಯೂ ಕಟ್ಟಲಾಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ವಾಡಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಶಿವಕುಮಾರ್, ವಿಪುಲ್ ಕಾನಕುರ್ತೆ, ಏಸಪ್ಪ ಅವರು ಪರ್ಯಾಯ ಉದ್ಯೋಗದತ್ತ ಗಮನ ಹರಿಸಿದ್ದಾರೆ. ಕೆಲವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್‌ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ, ಅದನ್ನೂ ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದ ಮುಂದೆ ಏನು ಮಾಡಬೇಕು ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಇಲ್ಲಿ ಉದ್ಯೋಗ ಸಿಗದಿದ್ದರೆ ಅನೇಕರು ಮುಂಬೈ, ಪುಣೆಗೆ ತೆರಳಿ ಯಾವುದಾದರೂ ಉದ್ಯೋಗ ಕಂಡುಕೊಳ್ಳುತ್ತಿದ್ದರು. ಅಲ್ಲಿಯೂ ಕೋವಿಡ್ ಹಾವಳಿಯಿಂದಾಗಿ ಇರಲಾಗದ ಪರಿಸ್ಥಿತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.