ADVERTISEMENT

ಗುಲಬರ್ಗಾ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ‘ಸುಸ್ತು’

ಹಿಂದಿನ ಪರೀಕ್ಷೆ ಮುಗಿಯುವ ಮೊದಲೇ ಮುಂದಿನ ತರಗತಿ ಆರಂಭಕ್ಕೆ ಆದೇಶ

ಓಂಕಾರ ಬಿರಾದಾರ
Published 16 ಜನವರಿ 2026, 6:51 IST
Last Updated 16 ಜನವರಿ 2026, 6:51 IST
ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಭವನದ ಕಟ್ಟಡ
ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಭವನದ ಕಟ್ಟಡ   

ಓಂಕಾರ ಬಿರಾದಾರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಹೊರಡಿಸಿದ 2025–26ರ ಸ್ನಾತಕ ತರಗತಿಗಳ 2, 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿ ಕಂಡು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಲ್ಲಿ ಆತಂಕ ಶುರುವಾಗಿದೆ.

ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಬರುವ 1, 3 ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯಿಸುವ 5ನೇ ಸೆಮಿಸ್ಟರ್ ಪದವಿಯ ಎಲ್ಲಾ ಪರೀಕ್ಷೆಗಳು ಜನವರಿ 15ರ ಒಳಗಾಗಿ ಮುಗಿಯಬೇಕಿತ್ತು. ಆದರೆ, ಇಲ್ಲಿಯವರೆಗೂ ಪ್ರಾರಂಭವಾಗಿಲ್ಲ. ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳು ಕನಿಷ್ಠ ಪಕ್ಷ ಮಾರ್ಚ್‌ವರೆಗೆ ನಡೆಯಲಿವೆ.

ADVERTISEMENT

ಆದರೆ, ವಿಶ್ವವಿದ್ಯಾಲಯವು ಜನವರಿ 16ರಿಂದ 2, 4, 6ನೇ ಸೆಮಿಸ್ಟರ್‌ ತರಗತಿಗಳನ್ನು ಆರಂಭಿಸುವಂತೆ ಪ‌ದವಿ ಮಹಾವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳು ಮುಗಿಯದೆ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳು ಪ್ರಾರಂಭಿಸಲು ಹೇಗೆ ಎಂಬ ಪ್ರಶ್ನೆ ಮೂಡಿದೆ.

‘ಸ್ನಾತಕ ಕೋರ್ಸ್‌ಗಳ ಸೆಮಿಸ್ಟರ್ ತರಗತಿಗಳ ಬೋಧನೆಗೆ ಜನವರಿ 16ರಿಂದ ಮೇ 9ರವರೆಗೆ ಕಾಲೇಜುಗಳನ್ನು ನಡೆಸಿ ಎಂದು ವಿಶ್ವವಿದ್ಯಾಲಯ ಪ್ರಕಟಿಸಿರುವ ವೇಳಾಪಟ್ಟಿ ನೋಡಿದರೆ, ಕೇವಲ ತಾಂತ್ರಿಕವಾಗಿ ಮಾತ್ರ ಸರಿಯಾಗಿದೆ. ಆದರೆ, ಶೈಕ್ಷಣಿಕ ದೃಷ್ಟಿಯಿಂದ ಗಮನಿಸಿದಾಗ ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಮಾರಕವಾಗಿದೆ’ ಎನ್ನುತ್ತಾರೆ ಕಾಲೇಜಿನ ‍ಪ್ರಾಧ್ಯಾಪಕರೊಬ್ಬರು.

‘ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪದವಿ ತರಗತಿಗಳ ಬೋಧನೆ ಪ್ರಾರಂಭಿಸಲು ಹೇಗೆ ಸಾಧ್ಯ? ತರಗತಿಗಳ ಬೋಧನೆಗೆ ಕನಿಷ್ಠ 90 ಕೆಲಸದ ದಿನಗಳು (ರಜೆ ದಿನ ಹೊರತುಪಡಿಸಿ) ಬೇಕಾಗುತ್ತವೆ. ಆಗ ಮಾತ್ರ ಪಠ್ಯಕ್ರಮದ ಪೂರ್ಣ ಬೋಧನೆ ಮಾಡಲು ಸಾಧ್ಯವಿದೆ. ಒಂದೂವರೆ ತಿಂಗಳಿಗಿಂತಲೂ ಹೆಚ್ಚಿನ ಮಹತ್ವದ ಶೈಕ್ಷಣಿಕ ಬೋಧನಾ ಅವಧಿ ನಷ್ಟವಾಗುತ್ತದೆ’ ಎನ್ನುತ್ತಾರೆ ಅವರು.

‘ವಿಶ್ವವಿದ್ಯಾಲಯ ಆಡಳಿತ ಮಂಡಳಿಯಿಂದ ಅವೈಜ್ಞಾನಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ತರಾತುರಿಯಲ್ಲಿ ಮೊಟಕುಗೊಳಿಸುತ್ತಿರುವುದು ಸರಿಯಲ್ಲ. ವಿಶ್ವವಿದ್ಯಾಲಯದ ಇಂಥ ನಿರ್ಲಕ್ಷ್ಯ ಧೋರಣೆಯಿಂದ ಹಿಂದುಳಿದ ನಮ್ಮ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪ್ರಗತಿ ಸಾಧ್ಯವೇ’ ಎಂದು ಪ್ರಾಧ್ಯಾಪಕರೊಬ್ಬರು ಪ್ರಶ್ನಿಸುತ್ತಾರೆ. 

ರಮೇಶ ಲಂಡನಕರ್
ಹೇಮಂತ
ಶೈಕ್ಷಣಿಕ ಅವಧಿಯ ನಷ್ಟಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ಮಾರ್ಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು
ಹೇಮಂತ ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ
ಕುಲಪತಿಗಳ ಜೊತೆ ಚರ್ಚಿಸಿ ಕಾಲೇಜುಗಳು ಆರಂಭಿಸುವ ಶೈಕ್ಷಣಿಕ ವೇಳಾಪಟ್ಟಿ ದಿನಾಂಕವನ್ನು ಮುಂದೂಡಲಾಗುವುದು
ರಮೇಶ ಲಂಡನಕರ್‌ ಕುಲಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.