
ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಜನವರಿ 28ರಿಂದ ಪದವಿ ತರಗತಿಗಳ ಎನ್‌ಇಪಿ ಹಾಗೂ ಎಸ್‌ಇಪಿ 1, 3 ಮತ್ತು 5ನೇ ಸೆಮಿಸ್ಟರ್ (ರೆಗ್ಯುಲರ್/ ರಿಪೀಟರ್ಸ್ಸ್ ) ಪರೀಕ್ಷೆಗಳು ಆರಂಭವಾಗಿವೆ. ಆದರೂ ಈವರೆಗೆ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿಲ್ಲ ಎಂದು ತಿಳಿದು ಬಂದಿದೆ.
ವಿಶ್ವವಿದ್ಯಾಲಯ ವ್ಯಾಪ್ತಿಯ ಬೆರಳೆಣಿಕೆ ಕಾಲೇಜುಗಳನ್ನು ಹೊರತುಪಡಿಸಿ, ಹಲವಾರು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಾರೆ ಎಂಬ ಆರೋಪ ಇದೆ. ಮೊದಲು ನಡೆದ ಪರೀಕ್ಷೆಗಳಲ್ಲಿ ಅವಧಿಗೂ ಮೊದಲೇ ವಾಟ್ಸ್‌ಆ್ಯಪ್‌ನಲ್ಲಿ ಬಯಲಾದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷಾ ಸಾಮೂಹಿಕ ನಕಲು ನಡೆದ ಪ್ರಕರಣಗಳು ದಾಖಲಾಗಿವೆ.
ನಕಲು ತಡೆಗಟ್ಟಲು ಪ್ರಾಮಾಣಿಕ ಹಿರಿಯ ಪ್ರಾಧ್ಯಾಪಕರನ್ನು ಪರೀಕ್ಷಾ ಕಾರ್ಯಗಳಿಗೆ ನೇಮಿಸುವುದು, ಮುಖ್ಯವಾಗಿ ಪರೀಕ್ಷೆಗಳ ಪಾವಿತ್ರತೆ ಕಾಪಾಡುವುದು ಮತ್ತು ದುರಾಚಾರ ನಡೆಯದಂತೆ ತಡೆಗಟ್ಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ವಿಶ್ವವಿದ್ಯಾಲಯದ ಜವಾಬ್ದಾರಿಯಾಗಿದೆ.
ಪರೀಕ್ಷಾ ಕೈಪಿಡಿಯ ಪ್ರಕಾರ ಕಾಲೇಜು ಪ್ರಾಂಶುಪಾಲರನ್ನು ಆಂತರಿಕ ಮೇಲ್ವಿಚಾರಕರು ಹಾಗೂ ಬೇರೆ ಕಾಲೇಜಿನ ಹಿರಿಯ ಬೋಧನಾ ಸಿಬ್ಬಂದಿಯನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುವುದು ವಾಡಿಕೆ. ಜೊತೆಗೆ ವಿಚಕ್ಷಣದಳ (ತಂಡ)ಗಳನ್ನು ರಚನೆ ಮಾಡಿ ಪರೀಕ್ಷೆಯಲ್ಲಿ ನಕಲು ತಡೆಯಲು ಕ್ರಮವಹಿಸುವ ಪ್ರಕ್ರಿಯೆ ಹಿಂದನಿಂದಲೂ ಬಂದಿದೆ.
ಪರೀಕ್ಷ ಆರಂಭವಾಗಿ ಮೂರು ದಿನಗಳು ಕಳೆದರೂ ಇನ್ನೂ ಬಾಹ್ಯ ಹಿರಿಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ (ತಂಡ)ಗಳನ್ನು ರಚಿಸಿ ನೇಮಕ ಮಾಡದಿರುವುದು ಸರಿಯಲ್ಲ. ಪರೀಕ್ಷೆಗಳಿಗೆ ಆದಷ್ಟು ಬೇಗ ನೇಮಕ ಮಾಡಿ ಆದೇಶಿಸಿ, ನ್ಯಾಯ ಒದಗಿಸಬೇಕು’ ಎಂಬುದು ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹವಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಆಂತರಿಕ ಹಾಗೂ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಿಸಬೇಕು. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಆ ಸಂಖ್ಯೆಯೂ ಹೆಚ್ಚಿಸಬೇಕು ಎಂಬ ನಿಯಮವಿದೆ. ಈ ಸಿಬ್ಬಂದಿ ಪ್ರಶ್ನೆಪತ್ರಿಕೆ ಪ್ಯಾಕೆಟ್ ಪರಿಶೀಲಿಸುವುದು, ಪರೀಕ್ಷಾ ಕೊಠಡಿಗಳಿಗೆ ಪೂರೈಸುವುದು, ನಿಗದಿತ ಸಮಯಕ್ಕೆ ಪರೀಕ್ಷೆಗಳನ್ನು ಪ್ರಾರಂಭಿಸುವುದು, ನಕಲು ನಡೆಯದಂತೆ ನೋಡಿಕೊಳ್ಳುವುದು, ಉತ್ತರ ಪತ್ರಿಕೆಗಳನ್ನು ಸರಿಯಾಗಿ ಪರಿಶೀಲಿಸಿ, ಪ್ಯಾಕೆಟ್ ಮಾಡಿಸಿ ನೊಡಲ್ ಕೇಂದ್ರಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ.
ವಿಚಕ್ಷಣದಳ ತಂಡದ ನಕಲು ಮತ್ತು ಇನ್ನಿತರ ಪರೀಕ್ಷಾ ದುರಾಚಾರ ನಡೆಸಿರುವ ವಿದ್ಯಾರ್ಥಿಗಳನ್ನು ಎಂಪಿಸಿ ವರದಿ ಮಾಡುವುದು, ಸಾಮೂಹಿಕ ನಕಲು, ಇನ್ನಿತರ ಗಂಭೀರ ಪರೀಕ್ಷಾ ದುರಾಚಾರದ ಮತ್ತು ಕಾಲೇಜು ಆಡಳಿತ ಮಂಡಳಿ/ಸಿಬ್ಬಂದಿ ಪಾತ್ರದ ಕುರಿತು ಮಾಹಿತಿ ನೀಡುವುದರೊಂದಿಗೆ ಕ್ರಮಕ್ಕಾಗಿ ಕುಲಸಚಿವ (ಮೌಲ್ಯಮಾಪನ )ರಿಗೆ ವರದಿ ಸಲ್ಲಿಸುತ್ತಾರೆ.
ಬಾಹ್ಯ ಮೇಲ್ವಿಚಾರಕರು ಹಾಗೂ ವಿಚಕ್ಷಣದಳ ತಂಡ ನೇಮಕವಾಗದಿರುವುದರಿಂದ ಪರೀಕ್ಷೆಗಳಲ್ಲಿ ನಕಲು ನಡೆಯುವ ಸಾಧ್ಯತೆ ಇದೆ. ಶೀಘ್ರ ತಂಡ ರಚನೆ ಮಾಡಬೇಕು.– ಹೆಸರು ಹೇಳಲು ಇಚ್ಚಿಸಿದ ಪ್ರಾಧ್ಯಾಪಕ
ಪದವಿ ಪರೀಕ್ಷೆಗಳಿಗಾಗಿ ವಿಚಕ್ಷಣದಳ ತಂಡದ ನೇಮಕಕ್ಕೆ ಪಟ್ಟಿ ತಯಾರಿಸಲಾಗಿದ್ದು ಕುಲಪತಿಗಳ ಅನುಮತಿ ಪಡೆದು ನೇಮಕ ಮಾಡಲಾಗುವುದು.– ಎನ್.ಜಿ.ಕನ್ನೂರ, ಕುಲಸಚಿವ (ಮೌಲ್ಯಮಾಪನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.