ADVERTISEMENT

ಗುವಿವಿ ಪ್ರಸಾರಾಂಗಕ್ಕೆ ಜಾಗದ ಕೊರತೆ

ಹೊಸ ಪುಸ್ತಕ ಪ್ರಕಟಣೆಗೆ ಪ್ರಕಾಶಕರ ಹಿಂದೇಟು; ಪೆಟ್ಟಿಗೆಯಲ್ಲಿ ಉಳಿದ ಪುಸ್ತಕಗಳು

ಮಲ್ಲಿಕಾರ್ಜುನ
Published 14 ಜನವರಿ 2022, 20:30 IST
Last Updated 14 ಜನವರಿ 2022, 20:30 IST
ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಕಚೇರಿಯ ಕೋಣೆಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಉಳಿದ ಪುಸ್ತಕಗಳ ರಾಶಿ
ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಕಚೇರಿಯ ಕೋಣೆಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಉಳಿದ ಪುಸ್ತಕಗಳ ರಾಶಿ   

ಕಲಬುರಗಿ: ವಿದ್ಯಾರ್ಥಿಗಳು, ಸಂಶೋಧಕರು, ಆಸಕ್ತರಿಗೆ ಜ್ಞಾನ ಭಂಡಾರವಾದ ಗುಲಬರ್ಗಾವಿಶ್ವವಿದ್ಯಾಲಯದ ಪ್ರಸಾರಾಂಗ ಇಕ್ಕಟ್ಟಾದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಪುಸ್ತಕಗಳನ್ನು ಜೋಡಿಸಲು ಜಾಗವಿಲ್ಲದೆ ರಟ್ಟಿನ ಪೆಟ್ಟಿಗೆ, ಮೂಟೆಯಲ್ಲಿಯೇ ಉಳಿದಿವೆ.

ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಸಾರಸ್ವತದ ಅಭಿವೃದ್ಧಿಯ ಧ್ಯೇಯದೊಂದಿಗೆ ಪ್ರಸಾರಾಂಗವು ಇದುವರೆಗೂ 150ಕ್ಕೂ ಅಧಿಕ ಕೃತಿಗಳು ಹಾಗೂ ಸಂಶೋಧನಾ ಕೃತಿಗಳನ್ನು ಹೊರತಂದಿದೆ.

ಪ್ರಚಾರೋಪನ್ಯಾಸ ಮಾಲೆ, ದತ್ತಿ ಉಪನ್ಯಾಸ ಮಾಲೆ, ಜ್ಞಾನಪೀಠ ಪುರಸ್ಕೃತರ ವಿಶೇಷ ಉಪನ್ಯಾಸ ಮಾಲೆ, ವಚನಗಳ ವಿಮರ್ಶಾ ಲೇಖನಗಳು, ಭಾಷಾಭಿವೃದ್ಧಿ ಸಂಪುಟ, ಸಮಗ್ರ ವಚನ ಸಂಪುಟ, ಡಾ.ಅಂಬೇಡ್ಕರ್ ಸಂಪುಟ, ಸಾಮಾನ್ಯ ಪುಸ್ತಕಗಳು ಸೇರಿದಂತೆ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಈ ಎಲ್ಲ ಪುಸ್ತಕಗಳನ್ನು ಜೋಡಿಸಿ ಇರಿಸಲು ಸ್ಥಳವೇ ಇಲ್ಲ.‌

ADVERTISEMENT

ಪ್ರಸಾರಾಂಗದ ಮುಖ್ಯಕಚೇರಿಯು ಕನ್ನಡ ಅಧ್ಯಯನ ವಿಭಾಗದ ಕಟ್ಟಡದ ನೆಲ ಮಹಡಿಯ ಹಾಲ್‌ನಂತಹ ಕೋಣೆಯಲ್ಲಿದೆ. ಕಚೇರಿಯ ಎಲ್ಲೆಂದರಲ್ಲಿ ನೂರಾರು ರಟ್ಟಿನ ಪೆಟ್ಟಿಗೆಯಲ್ಲಿ ಪುಸ್ತಕಗಳನ್ನು ಇರಿಸಲಾಗಿದೆ. ಕೆಲವನ್ನು ಕನ್ನಡ ಅಧ್ಯಯನ ವಿಭಾಗದ ಕೋಣೆಯೊಂದರಲ್ಲಿ ಇರಿಸಲಾಗಿದೆ. ರ‍್ಯಾಕ್‌ಗಳ ಕೊರತೆಯಿಂದ ಹೊಸದಾಗಿ ಬಂದ ವಚನಗಳ ಸಂಪುಟ ಮತ್ತು ಬೌದ್ಧ ಸಾಹಿತ್ಯ ಪುಸ್ತಕಗಳು ರಟ್ಟಿನ ಬಾಕ್ಸನಲ್ಲೇ ಉಳಿದಿವೆ.

‘ಪ್ರಸಾರಾಂಗಕ್ಕೆ ಜಾಗದ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ. ಕೃತಿಗಳನ್ನು ಪ್ರಕಟಿಸಿ ಒಪ್ಪವಾಗಿ ಜೋಡಿಸಲು ಸ್ಥಳಾವಕಾಶವೇ ಇಲ್ಲ. ಪ್ರತ್ಯೇಕವಾದ ಕಟ್ಟಡದ ವ್ಯವಸ್ಥೆ ಮಾಡಿಕೊಟ್ಟರೆ ಎಲ್ಲ ಪುಸ್ತಕಗಳನ್ನು ಜೋಡಿಸಿಟ್ಟು, ವಿದ್ಯಾರ್ಥಿಗಳನ್ನು ಸೆಳೆಯಬಹುದು’ ಎನ್ನುತ್ತಾರೆ ಪ್ರಸಾರಾಂಗದ ನಿರ್ದೇಶಕ ಎಚ್‌.ಟಿ. ಪೋತೆ.

‘ಪುಸ್ತಕಗಳ ಪ್ರಕಟಣೆಗೆ ಟೆಂಡರ್‌ ಕರೆದರೆ ಯಾವುದೇ ಪ್ರಕಾಶಕರು ಮುಂದೆ ಬರುವುದಿಲ್ಲ. ವಿದ್ಯಾರ್ಥಿ ಸ್ನೇಹಿ ಬೆಲೆಗೆ ಪುಸ್ತಕಗಳು ಮುದ್ರಿಸಬೇಕಾಗಿದ್ದು, ವ್ಯವಹಾರದ ದೃಷ್ಟಿಯಿಂದ ಪ್ರಕಾಶಕರು ಹಿಂದೇಟು ಹಾಕುತ್ತಿದ್ದಾರೆ. ಒಬ್ಬ ಪ್ರಕಾಶಕರ ಮನವೊಲಿಸಿ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಹೊಸ ಪುಸ್ತಕಗಳನ್ನು ಮುದ್ರಿಸಿಕೊಡಲು ಟೆಂಡರ್‌ ನೀಡಲಾಗಿದೆ. ಆ ಕೃತಿಗಳು ಬಂದರೆ, ಮತ್ತಷ್ಟು ಜಾಗದ ಸಮಸ್ಯೆ ಕಾಡಲಿದೆ’ ಎಂದರು.

‘ಇಡೀ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಪ್ರಸಾರಾಂಗವೂ ಅದಕ್ಕೆ ಹೊರತಾಗಿಲ್ಲ. ಒಬ್ಬ ನಿರ್ದೇಶಕ, ಒಬ್ಬ ಟೈಪಿಸ್ಟ್ ಹಾಗೂ ಗುತ್ತಿಗೆ ಆಧಾರದ ಮೇಲೆ ಒಬ್ಬ ಮಾರಾಟಗಾರರನ್ನು ಇದ್ದಾರೆ. ಎಲ್ಲ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲು ಇನ್ನು ನಾಲ್ವರು ಸಿಬ್ಬಂದಿಯ ಅವಶ್ಯವಿದೆ’ ಎನ್ನುತ್ತಾರೆ ಅವರು.

‘ಇದೇ ಕಟ್ಟಡದ ಮೇಲ್ಮಹಡಿಯಲ್ಲಿ ಹಸ್ತ ಪ್ರತಿಗಳ ಭಂಡಾರವಿದೆ. 500 ವರ್ಷಗಳ ಹಿಂದಿನ ಹಸ್ತಪ್ರತಿಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಾಪಾಡಿಕೊಂಡು ಬರಲಾಗುತ್ತಿದೆ. ತಾಳೆಗರಿ, ಕಾಗದ ಪ್ರತಿ, ಕಡತಗಳು (ಹುಣಸೆ ಹಣ್ಣಿನ ಸಿಪ್ಪೆ ಮತ್ತು ಇದ್ದಲಿ ಮಸಿಯಿಂದ ನಿರ್ಮಿತ) ಸೇರಿ 6,000ದಷ್ಟು ಹಸ್ತ ಪ್ರತಿಗಳಿವೆ’ ಎಂದು ಹಸ್ತಪ್ರತಿ ಸಂರಕ್ಷಕ ಡಾ.ಶಿವಪುತ್ರ ಮಾವನಿ ತಿಳಿಸಿದರು.

ವಾರ್ಷಿಕ ₹ 4 ಲಕ್ಷದಷ್ಟು ಪುಸ್ತಕ ಮಾರಾಟ

ವಿವಿಯ ಆವರಣದ ಕ್ಯಾಂಟೀನ್ ಬಳಿ ಪ್ರಸಾರಾಂಗ ಮಾರಾಟ ಮಳಿಗೆ ಇದ್ದು, ವಾರ್ಷಿಕ ಸುಮಾರು ₹4 ಲಕ್ಷದಷ್ಟು ಪುಸ್ತಕಗಳು ಮಾರಾಟ ಆಗುತ್ತವೆ. ವಿದ್ಯಾರ್ಥಿಗಳ ಜತೆಗೆ ಹೊರಗಿನವರು ಬಂದು ಖರೀದಿಸುತ್ತಾರೆ. ಆದರೆ, ಈ ಮಳಿಗೆ ತೀರಾ ಚಿಕ್ಕದಾಗಿದೆ. ಕೋವಿಡ್‌ ಬಳಿಕ ಖರೀದಿ ಪ್ರಮಾಣ ₹1 ಲಕ್ಷಕ್ಕೆ ಇಳಿಕೆಯಾಗಿದೆ. ತರಗತಿ ಪುನರಾರಂಭದ ಬಳಿಕ ನಿಧಾನಕ್ಕೆ ಕೊಳ್ಳುವವರ ಪ್ರಮಾಣ ಹೆಚ್ಚುತ್ತಿದೆ. ಗುತ್ತಿಗೆ ಮೇಲೆ 20 ವರ್ಷದಿಂದ ಕೆಲಸ ಮಾಡುತ್ತಿದ್ದು, ಒಂದು ವರ್ಷದಿಂದ ವೇತನ ಬಂದಿಲ್ಲ’ ಎಂದರು ಪ್ರಸಾರಾಂಗದ ಪುಸ್ತಕ ಮಾರಾಟ ಸಿಬ್ಬಂದಿ ಕಸ್ತೂರಿ ಘಟ್ಟಿಕಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.