ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಿಂದ ಬಿ.ಇಡಿ ವ್ಯಾಸಂಗದ ನೈಜತೆ ಪ್ರಮಾಣ ಪತ್ರಗಳನ್ನು ಪಡೆಯಲು ಪ್ರೌಢಶಾಲೆ ಸಹ ಶಿಕ್ಷಕರ ಗ್ರೇಡ್– 2 ವೃಂದಕ್ಕೆ ಬಡ್ತಿ ಪಡೆದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಪರದಾಡುತ್ತಿದ್ದಾರೆ.
ಯಾದಗಿರಿ, ಕಲಬುರಗಿ, ಬೀದರ್ ಸೇರಿದಂತೆ ಗುಲಬರ್ಗಾ ವಿವಿಯಿಂದ ಬಿ.ಇಡಿ ಪೂರ್ಣಗೊಳಿಸಿದವರ ಪೈಕಿ ನೂರಾರು ಅಭ್ಯರ್ಥಿಗಳು ಸರ್ಕಾರಿ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದೇವೆ. ಪ್ರೌಢಶಾಲೆ ಸಹ ಶಿಕ್ಷಕರ ಹುದ್ದೆಯ ಬಡ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ನೈಜತೆ ಪ್ರಮಾಣ ಪತ್ರ ನೀಡುವುದು ವಿಳಂಬವಾಗಿರುವುದರಿಂದ ಬಡ್ತಿ ಮತ್ತು ವೇತನ ಹೆಚ್ಚಳದಿಂದ ವಂಚಿತ ಆಗುವ ಆತಂಕ ಕಾಡುತ್ತಿದೆ ಎನ್ನುತ್ತಾರೆ ಶಿಕ್ಷಕರು.
2016, 2017, 2019 ಮತ್ತು 2022ರಲ್ಲಿ ನೇಮಕಾತಿ ಪರೀಕ್ಷೆಯಲ್ಲಿ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕವಾಗಿದ್ದಾರೆ. ಅವರಲ್ಲಿ ಕೆಲವರು ಮೀಸಲಾತಿ, ಸೇವಾ ಅನುಭವದ ಆಧಾರ ಮೇಲೆ ಪ್ರೌಢಶಾಲೆಗಳಿಗೆ ಬೋಧಿಸಲು ಬಡ್ತಿ ಪಡೆದಿದ್ದಾರೆ. ಕೆಲವು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಂದಲೇ ವಿವಿಗೆ ಪತ್ರ ಬರೆದು ನೈಜತೆ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಮತ್ತೆ ಕೆಲವು ಕಚೇರಿಗಳಲ್ಲಿ ಬಡ್ತಿ ಪಡೆದ ಶಿಕ್ಷಕರ ಕೈಗೇ ನೈಜತೆ ಪ್ರಮಾಣ ಪತ್ರಗಳ ಕೋರಿಕೆ ಲೇಟರ್‌ಗಳನ್ನು ಇರಿಸಿ, ವಿವಿಗೆ ತೆರಳಿ ತರುವಂತೆ ಸೂಚಿಸಲಾಗಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.
ವ್ಯಾಸಂಗದ ನೈಜತೆ ಪ್ರಮಾಣಪತ್ರ ಕೇಳಿದರೆ ಮೌಲ್ಯಮಾಪನದ ಕೇಸ್ ವರ್ಕರ್‌ಗಳು ತಮಗೆ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಮನವಿ ಕೊಟ್ಟು ವರ್ಷಗಳೇ ಕಳೆದಿದ್ದು, ಮತ್ತೊಮ್ಮೆ ಶುಲ್ಕ ಕಟ್ಟುವಂತೆ ತಾಕೀತು ಮಾಡುತ್ತಿದ್ದಾರೆ. ‘ನಾನು ಹೊಸದಾಗಿ ಬಂದಿದ್ದೇನೆ. ಅದರ ಬಗ್ಗೆ ಮಾಹಿತಿ ಇಲ್ಲ. ಬೇರೆಯವರನ್ನು ಕೇಳಿ’ ಎಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಪರೋಕ್ಷವಾಗಿ ಹಣಕ್ಕೆ ಬೇಡಿ ಇರಿಸುತ್ತಿದ್ದು, ಕೆಲವರಿಂದ ಸಾವಿರಾರು ರೂಪಾಯಿ ಲಂಚ ಪಡೆದು ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂದು ಮತ್ತೊಬ್ಬ ಶಿಕ್ಷಕರು ಆರೋಪಿಸಿದರು.
‘ನೈಜತೆ ಪ್ರಮಾಣ ಪತ್ರ ನೀಡುವಂತೆ 2021ರಲ್ಲಿ ಮನವಿ ಪತ್ರಕೊಟ್ಟು, ₹1,800 ಶುಲ್ಕವನ್ನೂ ಕಟ್ಟಿದ್ದೇನೆ. ಇದುವರೆಗೂ ಪ್ರಮಾಣ ಪತ್ರ ನೀಡಿಲ್ಲ. ಬಡ್ತಿಗೆ ನೈಜತೆ ದಾಖಲಾತಿ ಸಲ್ಲಿಕೆಯ ಗಡುವು ಮುಗಿಯುವ ಹಂತಕ್ಕೆ ಬಂದಿದ್ದರೂ ಮೌಲ್ಯಮಾಪನ ವಿಭಾಗದವರು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಶಿಕ್ಷಕ ಮಚೇಂದ್ರ ಬೇಸರ ವ್ಯಕ್ತಪಡಿಸಿದರು.
‘ವರ್ಷದ ಹಿಂದೆಯೇ ಪ್ರಮಾಣ ಪತ್ರಕ್ಕಾಗಿ ಶುಲ್ಕ ಕಟ್ಟಿದ್ದೇನೆ. ಮೌಲ್ಯಮಾಪನ ಕಚೇರಿಗೆ ಹೋದರೆ ಟೇಬಲ್‌ನಿಂದ ಟೇಬಲ್‌ಗೆ ಅಲೆಸುತ್ತಿದ್ದಾರೆ’ ಎಂದು ಮತ್ತೊಬ್ಬ ಶಿಕ್ಷಕ ವಿಜಯಕುಮಾರ ಅಲವತ್ತುಕೊಂಡರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ವಿವಿಯ ಮೌಲ್ಯಮಾಪನ ಕುಲಸಚಿವ ಎನ್.ಜಿ ಕಣ್ಣೂರ, ‘ಜೆಸ್ಕಾಂ ನೌಕರರು, ಶಿಕ್ಷಕರು ಸೇರಿದಂತೆ ಹಲವರ ನೈಜತೆಯ ಪ್ರಮಾಣ ಪತ್ರಗಳ ಕೋರಿಕೆಗಳು ಬರುತ್ತಿವೆ. ಕೆಲವು ಹಳೆಯವು ಆಗಿದ್ದರಿಂದ ಕಡತಗಳನ್ನು ಹುಡುಕಾಡಿ ನೀಡಲಾಗುತ್ತಿದೆ. ಬಿ.ಇಡಿ ವ್ಯಾಸಂಗ ಪ್ರಮಾಣ ಪತ್ರಗಳನ್ನೂ ವಿಳಂಬ ಮಾಡದೆ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.