ಗುಲಬರ್ಗಾ ವಿವಿಯಲ್ಲಿ ಭಾನುವಾರ ನಡೆದ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ರಾಮಾಯಣ ನಾಟಕ ಪ್ರದರ್ಶಿಸಿದರು
ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಯುವಜನೋತ್ಸವದ ಎರಡನೇ ದಿನವೂ ಸಡಗರ ಮನೆ ಮಾಡಿತ್ತು.
ಜ್ಞಾನಗಂಗಾ ಆವರಣದ ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗಾಯನ, ಕ್ಲಾಸಿಕ್ ಇನ್ಸ್ಟ್ರುಮೆಂಟ್ ವಾದನ, ಏಕವ್ಯಕ್ತಿ ಲಘು ಸಂಗೀತ ರಂಗು ತುಂಬಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕಾಂಕ ನಾಟಕ, ಮಿಮಿಕ್ರಿ, ಮೈಮ್, ಜನಪದ ಬುಡಕಟ್ಟು ನೃತ್ಯದ ಝಲಕ್ ಕಂಡುಬಂತು. ಭಾಸ್ಕರ್ ಸಭಾಂಗಣದಲ್ಲಿ ಬುದ್ಧಿಶಕ್ತಿ ಒರೆಗೆ ಹಚ್ಚುವ ರಸಪ್ರಶ್ನೆ ಸ್ಪರ್ಧೆ ಜರುಗಿದವು.
ಇದರೊಂದಿಗೆ ವಾಕ್ಪಟುತ್ವ ಸ್ಪರ್ಧೆ, ಚರ್ಚಾ ಸ್ಪರ್ಧೆ, ಅಂತಿಮಮಟ್ಟದ ರಸಪ್ರಶ್ನೆ ಹಾಗೂ ಹಿಂದಿ ಚರ್ಚಾ ಸ್ಪರ್ಧೆಗಳು ಜರುಗಿದವು. ಎಲ್ಲ ಬಗೆಯ ಸ್ಪರ್ಧೆಗಳಲ್ಲಿ ಯುವ ಪ್ರತಿಭೆಗಳು ಉತ್ಸಾಹದಿಂದ ಭಾಗವಹಿಸಿ, ಯುವಜನೋತ್ಸವಕ್ಕೆ ಮೆರುಗು ತಂದರು.
ಬೇರೆ ಸಭಾಂಗಣದಲ್ಲಿ ನಿಗದಿತ ಸಮಯಕ್ಕೆ ಸ್ಪರ್ಧೆಗಳು ಮುಗಿಯುತ್ತಿದ್ದಂತೆ ಯುವ ಸಮೂಹ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಧಾವಿಸಿದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಶಿಳ್ಳೆ, ಕೂಗಾಟ, ಹಾಗೂ ಚಪ್ಪಾಳೆ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗಮನಸೆಳೆದ ‘ದಲಿತ ಭಾರತ’ ನಾಟಕ: ಯುವಜನೋತ್ಸವದಲ್ಲಿ ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ದಲಿತ ಭಾರತ’ ನಾಟಕ ಎಲ್ಲರ ಮೆಚ್ಚುಗೆ ಪಡೆಯಿತು. ನಾಟಕಕ್ಕೆ ರಂಗಕರ್ಮಿ ವಿಶ್ವರಾಜ ಪಾಟೀಲ ನಿರ್ದೇಶನವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.