ADVERTISEMENT

ಕಲಬುರಗಿ: ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:51 IST
Last Updated 11 ಜುಲೈ 2025, 6:51 IST
ಕಲಬುರಗಿ ನಗರದ ಚಂದ್ರಕಾಂತ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರೀಯ ವಿವಿಯ ಉಪನ್ಯಾಸಕ ರವೀಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು
ಕಲಬುರಗಿ ನಗರದ ಚಂದ್ರಕಾಂತ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರೀಯ ವಿವಿಯ ಉಪನ್ಯಾಸಕ ರವೀಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು   

ಕಲಬುರಗಿ: ನಗರದ ವಿವಿಧ ದೇವಸ್ಥಾನಗಳು, ಶಿಕ್ಷಣ ಕೇಂದ್ರಗಳಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಯಿತು.

ಶರಣಬಸವೇಶ್ವರ ದೇವಸ್ಥಾನ, ಸಾಯಿ ಮಂದಿರ, ರಾಮಮಂದಿರ, ಅನಂತಶಯನ ಬಾಲಾಜಿ ಮಂದಿರ, ಬಾಲಾಜಿ ವೆಂಕಟರಮಣ ದೇವಸ್ಥಾನ, ಬ್ರಹ್ಮಪೂರದ ರಾಯರ ಗುಡಿ, ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಸೇರಿದಂತೆ ಹಲವು ದೇವಸ್ಥಾನಗಳು, ಆಶ್ರಮಗಳಲ್ಲಿ ನಡೆದ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಗುರುಪರಂಪರೆ ಹಾಗೂ ಗುರುವಿನ ಮಹತ್ವ ತಿಳಿಸುವ ವಿಶೇಷ ಉಪನ್ಯಾಸಗಳು ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಜರುಗಿದವು. ಸ್ವಾಮೀಜಿಗಳ ತುಲಾಭಾರ, ಭಜನೆ, ಪ್ರಾರ್ಥನೆ, ಧ್ಯಾನಗಳು ನಡೆದವು.

ADVERTISEMENT

ತುಲಾಭಾರ: ತಾಲ್ಲೂಕಿನ ಅವರಾದ (ಬಿ) ಗ್ರಾಮದ ಸ್ವಾಮಿ ಸಮರ್ಥ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ರಾಮಚಂದ್ರ ಸ್ವಾಮೀಜಿ ತುಲಾಭಾರ ಜರುಗಿತು.

ದೇವಿಂದ್ರ ದೇಸಾಯಿ ಹಾಗೂ ಶಾರದಾ ದೇವಿಂದ್ರ ದಂಪತಿ ತುಲಾಭಾರ ಸೇವೆಯನ್ನು ನಡೆಸಿಕೊಟ್ಟರು. ಈ ವೇಳೆ ಮನೋಹರ ಪತ್ತಾರ, ರಾಕೇಶ ಕಲ್ಲೂರ, ಶ್ರೀನಿವಾಸ ದೇಸಾಯಿ ಕಲ್ಲೂರ, ಲಕ್ಷ್ಮಿ ಕಲ್ಲೂರ, ಶಾರದಾ ಕಲ್ಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶ್ರೇಷ್ಠವಾದ ಹಬ್ಬ: ನಗರದ ಹೊರವಲಯದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯಲ್ಲಿ ಗುರುವಾರ ಗುರುಪೂರ್ಣಿಮೆ ಆಚರಿಸಲಾಯಿತು.

ಶಾಲೆಯ ಕರೆಸ್ಪಾಂಡೆಂಟ್ ಕೃಷ್ಣ ಜೋಶಿ ಮಾತನಾಡಿ, ‘ಮಹರ್ಷಿ ವ್ಯಾಸರು ಜನಿಸಿದ್ದ ದಿನದಂದು ಗುರು ಪೂರ್ಣಿಮೆ ದಿನವಾಗಿ ಆಚರಿಸಲಾಗುತ್ತಿದೆ. ವ್ಯಾಸರು ಮಹಾಭಾರತ, ಭಾಗವತ ಮತ್ತು ಬ್ರಹ್ಮಸೂತ್ರಗಳನ್ನು ಬರೆದಿದ್ದಾರೆ. ಭಾರತೀಯ ಜ್ಞಾನಪರಂಪರೆಯ ಹಬ್ಬಗಳಲ್ಲಿ ಗುರುಪೂರ್ಣಿಮೆ ಸಹ ಶ್ರೇಷ್ಠವಾದ ಹಬ್ಬವಾಗಿದೆ’ ಎಂದು ಹೇಳಿದರು.

ಶಾಲೆಯ ಪ್ರಧಾನಾಚಾರ್ಯ ವಂಶಿಕೃಷ್ಣ, ಆಡಳಿತಾಧಿಕಾರಿ ಶ್ರೀಕಾಂತ ಪಾಟೀಲ, ಶೈಕ್ಷಣಿಕ ಸಂಯೋಜಕ ರವಿಕುಮಾರ್ ಉಪಸ್ಥಿತರಿದ್ದರು. ಎಲ್‌. ಸುಜಾತಾ ನಿರೂಪಿಸಿದರು. ಗೌರ ಸ್ವಾಗತಿಸಿದರು. ಓಂಕಾರ್ ವಂದಿಸಿದರು.

ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಸ್ವಾಮಿ ಸಮರ್ಥ ದೇವಸ್ಥಾನದಲ್ಲಿ ಗುರುವಾರ ರಾಮಚಂದ್ರ ಸ್ವಾಮೀಜಿಯ ತುಲಾಭಾರ ಜರುಗಿತು
ಕಲಬುರಗಿ ಹೊರವಲಯದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ಗುರುಪೂರ್ಣಿಮೆ ಅಂಗವಾಗಿ ಮಹರ್ಷಿ ವ್ಯಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು

‘ಗುರುವೆಂದರೆ ಶಕ್ತಿಯ ಚಿಲುಮೆ’:

‘ಜ್ಞಾನ ದೇಗುಲದ ಜೀವಂತ ದೈವ ವಿದ್ಯಾರ್ಥಿಗಳನ್ನು ಸತ್‌ಪ್ರಜೆಗಳನ್ನಾಗಿ ಮಾಡುವ ಶಿಲ್ಪಿಗಳಾದ ಶಿಕ್ಷಕರು ಅರ್ಚಕರು ಗುರುವೆಂದರೆ ಶಕ್ತಿಯ ಚಿಲುಮೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗಣಕಯಂತ್ರ ವಿಭಾಗದ ಉಪನ್ಯಾಸಕ ರವೀಂದ್ರ ಹೆಗಡೆ ಹೇಳಿದರು. ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸುಶಿಕ್ಷಿತರಾದರೆ ಸಾಲದು ಸುಸಂಸ್ಕೃತರು ಸನ್ನಡತೆ ದೇಶಪ್ರೇಮ ಹಾಗೂ ಉದಾರ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಕೈಲಾಸ ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ.ಶಿವಶಂಕರ ರಾವ ಎಚ್.ಆರ್. ವಾಣಿಶ್ರೀ ಉಪನ್ಯಾಸಕರು ಸಿಬ್ಬಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಮಯ್ಯ ನಿರೂಪಿಸಿದರು. ಶಿವಾನಿ ಸ್ವಾಗತಿಸಿದರು. ಸ್ವಾತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.