ಕಲಬುರಗಿ: ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತಂದು ₹ 100 ಕೋಟಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಕಲಬುರಗಿ ತಾಲ್ಲೂಕು ಘಟಕದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಹಡಪದ ಸಮಾಜದವರು ಸುಮಾರು 15 ಲಕ್ಷ ಇದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಪರಿಪಾಲಕರಾಗಿದ್ದು, ಯಾವುದೇ ಜಾತಿ, ಧರ್ಮದ ತಾರತಮ್ಯ ಮಾಡದೆ ಕ್ಷೌರ ಸೇವೆ ಮಾಡುತ್ತಿದ್ದೇವೆ. ಇಂತಹ ವೃತ್ತಿನಿರತ ಹಡಪದ ಸಮಾಜದವರು ಸಂಕಷ್ಟದಲ್ಲಿ ಸಿಲುಕ್ಕಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಮಾಜ ಅತಿ ಹಿಂದುಳಿದಿದ್ದು, ನಿತ್ಯ ದೌರ್ಜನ್ಯಕ್ಕೆ ಒಳಗಾಗಿ ಜಾತಿ ನಿಂದನೆ, ಅಸ್ಪೃಶ್ಯತೆಗೂ ಗುರಿಯಾಗುತ್ತಿದ್ದೇವೆ. ರಾಜ್ಯ ಸರ್ಕಾರ ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು’ ಎಂದು ಮನವಿ ಮಾಡಿದರು.
‘ನನೆಗುದಿಗೆ ಬಿದ್ದಿರುವ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಮಂಡಳಿಗೆ ₹ 100 ಕೋಟಿ ಅನುದಾನ ನೀಡಿ, ಮಂಡಳಿ ಚಟುವಟಿಕೆ ಆರಂಭಿಸಬೇಕು. ಹಜಾಮ ಎಂಬ ಜಾತಿ ನಿಂದನೆ ಪದ ಬಳಕೆ ಮಾಡಿದವರಿಗೆ ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೊಳಿಸಬೇಕು. ಕ್ಷೌರಿಕರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸರ್ಕಾರದಿಂದ ನೀಡಬೇಕು’ ಎಂದು ಮನವಿ ಮಾಡಿದರು.
‘ಬಸವ ಕಲ್ಯಾಣದಲ್ಲಿರುವ ಬಸವಣ್ಣನವರ ಅರಿವಿನ ಗವಿ ಪಕ್ಕದಲ್ಲಿ (ಎಡಭಾಗ) ಹಡಪದ ಅಪ್ಪಣ್ಣನವರ ಗವಿಯಾಗಿದ್ದು, ಅದನ್ನು ಬಸವಕಲ್ಯಾಣ ಪ್ರಾಧಿಕಾರಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವ ಸಮಾಜದ ಯಾರಿಗಾದರೂ ಒಬ್ಬರಿಗೆ ನಿಗಮ ಮಂಡಳಿ ಅಥವಾ ವಿವಿಧ ಇಲಾಖೆಗಳಲ್ಲಿ ನಾಮನಿರ್ದೇಶನ ಮಾಡಬೇಕು’ ಎಂದು ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಶಹಾಬಾದ್ ಮಠದ ಬಾಲ ಬ್ರಹ್ಮಚಾರಿ ರಾಜಶಿವಯೋಗಿ, ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ತಾಲ್ಲೂಕಾಧ್ಯಕ್ಷ ಚಂದ್ರಶೇಖರ ಹಡಪದ ತೋನಸನಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸುಗೂರ, ತಾಲ್ಲೂಕು ಕಾರ್ಯಾಧ್ಯಕ್ಷ ರಮೇಶ ಕವಲಗಾ, ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.