ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಪವಮಾನ ಸುತ ಹುನುಮಂತನ ಜಯಂತಿಯನ್ನು ಸಂಭ್ರಮ, ಸಡಗರ, ಶ್ರದ್ಧಾ– ಭಕ್ತಿಯಿಂದ ಆಚರಿಸಲಾಯಿತು.
ಜಯಂತಿ ಹಿಂದಿನ ದಿನವೇ ಆಂಜನೇಯ ದೇವಸ್ಥಾನಗಳನ್ನು ತಳಿರು– ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿ, ವಿವಿಧ ಕಾಣಿಕೆಗಳನ್ನು ಅರ್ಪಿಸಿದರು.
ನಗರದ ಕೋರಂಟಿ ಹನುಮಾನ ದೇಗುಲ, ಕರುಣೇಶ್ವರ ನಗರದ ಜೈ ವೀರ ಹನುಮಾನ ದೇಗುಲ, ಗೋದುತಾಯಿ ನಗರದ ಆಂಜನೇಯ ದೇಗುಲ, ಖಾದ್ರಿ ಚೌಕ್‌ನ ಶಕ್ತಿ ಹನುಮಾನ ಮಂದಿರ, ಶಹಾಬಜಾರ್ ನಾಕಾದ ಹನುಮಾನ ಮಂದಿರ, ಲಾಲ್ ಹನುಮಾನ ದೇವಸ್ಥಾನ, ವೆಂಕಟೇಶನಗರದ ಗಾರ್ಡನ್‌ನಲ್ಲಿರುವ ಹನುಮಾನ ಮಂದಿರ, ಹಳೇ ಜೇವರ್ಗಿ ರಸ್ತೆಯ ಮುದ್ದೆ ಹನುಮಾನ ಮಂದಿರ, ಸೇಡಂ ರಸ್ತೆಯ ಸ್ಮಶಾನ ಹನುಮಾನ ದೇವಸ್ಥಾನ, ಪ್ರಶಾಂತ ನಗರದ ಹನುಮಾನ ಮಂದಿರ, ಜೆ.ಆರ್. ನಗರದ ಹನುಮಾನ ದೇವಸ್ಥಾನ, ಜಗತ್ ಬಡಾವಣೆಯ ಸ್ವಯಂಭೂ ಹನುಮಾನ ಸೇರಿದಂತೆ ಹಲವೆಡೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಹನುಮಾನ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಸುಕಿನ ಜಾವ ಪ್ರಾತಃ ಸುಪ್ರಭಾತ, ಪಂಚಾಮೃತ ಅಭಿಷೇಕ, ಮಹಾಪೂಜೆ, ಬಾಲ ಹನುಮಂತ ದೇವರ ಮೂರ್ತಿಗಳ ತೊಟ್ಟಿಲು ಸೇವೆ, ಪವಮಾನ ಹೋಮ, ಸತ್ಯನಾರಾಯಣ ಪೂಜೆ, ಪಾರಾಯಣ, ಪಲ್ಲಕ್ಕಿ ಸೇವೆ, ಪ್ರವಚನ, ಭಜನೆ, ಹನುಮಾನ ಚಾಲೀಸಾ ಪಠಣ, ರಾಮಾಯಣ ಹರಿಕತೆಗಳು ಸೇರಿದಂತೆ ನಾನಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನೆತ್ತಿ ಸುಡವ ಬಿಸಿಲನ್ನು ಲೆಕ್ಕಿಸದೆ ಕುಟುಂಬ ಸಮೇತರಾಗಿ ಬಂದ ನೂರಾರು ಭಕ್ತರು ದೇವಸ್ಥಾನಗಳ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಿಸಿಲಿನ ಝಳದಿಂದ ಬಳಲಿದ ಭಕ್ತರಿಗೆ ಎಲ್ಲ ದೇವಸ್ಥಾನಗಳಲ್ಲೂ ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಲಾಗಿತ್ತು. ಕೆಲವು ದೇವಸ್ಥಾನಗಳಲ್ಲಿ ಅನ್ನ ದಾಸೋಹದ ವ್ಯವಸ್ಥೆ ಇತ್ತು. ಹರಕೆ ಹೊತ್ತ ಭಕ್ತರೂ ಕೇಸರಿ ಬಾತ್, ಬಾಳೆ ಹಣ್ಣು, ರೈಸ್ ಬಾತ್‌ನ ಪ್ರಸಾದ ವ್ಯವಸ್ಥೆ ಮಾಡಿದ್ದರು.
ವಿಶಿಷ್ಟ ಹೆಸರಿನಿಂದ ಕರೆಯುವ ಬ್ರಹ್ಮಪುರದ ‘ರೋಕಡಾ ಹನುಮಾನ್’ ದೇವಸ್ಥಾನ, ಎಂಎಸ್‌ಕೆ ಮಿಲ್ ಪ್ರದೇಶದಲ್ಲಿ ವ್ಯಾಸರಾಜತೀರ್ಥರು ಪ್ರತಿಷ್ಠಾಪಿಸಿದ ಗಂಟೆ ಹನುಮಂತ, ಸಿದ್ಧಿ ಅಂಜನೇಯ ದೇವಸ್ಥಾನದಲ್ಲಿಯೂ ಭಕ್ತರ ದಟ್ಟಣೆ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.