ADVERTISEMENT

ತೊಗರಿ ಬೆಳೆಗಾರರಿಗೆ ಸ್ಪಂದಿಸದ ಸರ್ಕಾರ

ಜಗತ್ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದವರೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 3:18 IST
Last Updated 14 ಜನವರಿ 2023, 3:18 IST
ಪಂಚರತ್ನ ಯಾತ್ರೆಯ ಅಂಗವಾಗಿ ಕಲಬುರಗಿಯ ಜಗತ್‌ ವೃತ್ತದಿಂದ ಎಸ್‌ವಿಪಿ ವೃತ್ತದವರಗೆ ಶುಕ್ರವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರೋಡ್‌ ಶೋ ನಡೆಸಿದರು  –ಪ್ರಜಾವಾಣಿ ಚಿತ್ರ
ಪಂಚರತ್ನ ಯಾತ್ರೆಯ ಅಂಗವಾಗಿ ಕಲಬುರಗಿಯ ಜಗತ್‌ ವೃತ್ತದಿಂದ ಎಸ್‌ವಿಪಿ ವೃತ್ತದವರಗೆ ಶುಕ್ರವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರೋಡ್‌ ಶೋ ನಡೆಸಿದರು  –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ನೆಟೆರೋಗದಿಂದ ತೊಗರಿ ಬೆಳೆಗಾರರು ತೀವ್ರ ನಷ್ಟಕ್ಕೀಡಾಗಿದ್ದು, ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಂಚರತ್ನ ಯಾತ್ರೆ ಪ್ರಯುಕ್ತ ನಗರದ ಜಗತ್ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದವರೆಗೆ ಶುಕ್ರವಾರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಅವರು, ‘ಜನರ ಒಳಿತಿಗೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ರೈತರಿಗೆ ಬೆಳೆ ವಿಮೆ ಹಣ ಮತ್ತು ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಖಾಸಗಿ ಕಂಪನಿಗಳು ರೈತರ ಹಣ ಕೊಳ್ಳೆ ಹೊಡೆದಿವೆ’ ಎಂದರು.

‘ಬೆಳೆ ಹಾನಿ ಮತ್ತು ಆರ್ಥಿಕ ಸಂಕಷ್ಟದಿಂದ ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವುದು ಮುಂದುವರೆದಿದೆ. ಬಿಜೆಪಿ ಸರ್ಕಾರವು ಹೆಸರಿಗೆ ಮಾತ್ರ ರೈತಪರ ಎಂದು ಹೇಳುತ್ತದೆ ಹೊರತು ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ರೈತರ ಬಗ್ಗೆ ಹೀಗೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ’ ಎಂದರು.

ADVERTISEMENT

‘ವಿವೇಕಾನಂದರ ಹೆಸರಲ್ಲಿ ಬಿಜೆಪಿ ಸರ್ಕಾರ ಯುವಜನೋತ್ಸವ ಮಾಡಿದೆ. ಆದರೆ ಅಲ್ಲಿ ವಿವೇಕಾನಂದರ ಭಾವಚಿತ್ರಗಳನ್ನೇ ಹಾಕಿಲ್ಲ. ರೈತರ ಹೆಸರಿನಲ್ಲಿ ರಾಜಕೀಯ ಮಾಡಿ, ಅವರಿಗೆ ಯಾವುದೇ ಅನುಕೂಲ ಕೊಟ್ಟಿಲ್ಲ. ಇನ್ನು 3 ತಿಂಗಳಿನಲ್ಲಿ ರಾಜ್ಯದ ಜನ ಬಿಜೆಪಿಯನ್ನು ನಿರ್ಮೂಲನ ಮಾಡುತ್ತಾರೆ’ ಎಂದು ಎಚ್ಚರಿಸಿದರು.

‘ನರೇಂದ್ರ ಮೋದಿ ಹೆಸರು ಹೇಳಿಕೊಂಡು ಎಷ್ಟು ದಿನ ಚುನಾವಣೆ ಮಾಡುತ್ತೀರಿ? ನೀವು 3 ವರ್ಷ ಆಡಳಿತ ನಡೆಸಿ ಮಾಡಿದ್ದೇನು? ಮೋದಿ ಹೆಸರು ಹೇಳಿದ್ರೆ ಜನ ಮರುಳಾಗುತ್ತಾರಾ? ಹುಬ್ಬಳ್ಳಿಗೆ ಗುರುವಾರ ಬಂದಿದ್ದರಲ್ಲ. ಏನು ಕೊಡುಗೆ ಕೊಟ್ಟಿದ್ದಾರೆ? ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೊಡುಗೆ ಏನು? ಬಿಜೆಪಿಯ ದೆಹಲಿ ನಾಯಕರು ಇಲ್ಲಿ ಬಂದು ಭಯ ಹುಟ್ಟಿಸಲು ಸಾಧ್ಯವಿಲ್ಲ’ ಎಂದರು.

‘ಭಾರತ್ ಜೋಡೊ ಸಮಾರೋಪ ಸಮಾರಂಭಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ನಾನು ಜನರ ಕಷ್ಟ–ಸುಖ ನೋಡಬೇಕು. ನಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿವೆ. ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿಲ್ಲ’ ಎಂದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಕಡಣಿ, ಪಟ್ಟಣ, ಕಲಬುರಗಿ ಉತ್ತರ ಕ್ಷೇತ್ರದ ಗಂಜ್, ಮುಸ್ಲಿಂ ಚೌಕ್ ಸೇರಿದಂತೆ ವಿವಿಧೆಡೆ ಸಂಚರಿಸಿ ಜನರೊಂದಿಗೆ ಬೆರೆತರು. ಅಹವಾಲು ಆಲಿಸಿದರು.

ಬೀದರ್ ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಮಹಾಗಾಂವಕರ್, ಕಲಬುರಗಿ ದಕ್ಷಿಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೃಷ್ಣಾರೆಡ್ಡಿ, ಅಳಂದ ಕ್ಷೇತ್ರದ ಅಭ್ಯರ್ಥಿ ಮಹೇಶ್ವರಿ ವಾಲಿ ಹಾಗೂ ಇತರ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜಗತ್ ವೃತ್ತದಿಂದ ಎಸ್‌ವಿಪಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಬೃಹತ್ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿದರು. ಅಲ್ಲಿಂದ ಅವರು ನಿರ್ಗಮಿಸಿದ ಬಳಿಕ ಶಾಸಕ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ನೆಟೆರೋಗದಿಂದ ಹಾಳಾದ ತೊಗರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಬರೆದ ಮನವಿಯನ್ನು ಹೆಚ್ಚು ವರಿ ಜಿಲ್ಲಾಧಿಕಾರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.