
ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನಕ್ಕೆ ಗುರುವಾರ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ ನೀಡಿ, ತಮ್ಮ ಕುಟುಂಬದ ಸಂಕಷ್ಟ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಅವರು ನೇರವಾಗಿ ಕಲಬುರಗಿಯಿಂದ ರಸ್ತೆ ಮೂಲಕ ತಾಲ್ಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಬಂದು, ದತ್ತಾತ್ರೇಯ ಮಹಾರಾಜರ ದೇವಸ್ಥಾನದ ಗರ್ಭಗುಡಿಗೆ ತೆರಳಿ, ದತ್ತಾತ್ರೇಯ ಮಹಾರಾಜರ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕಾಕಡಾರತಿ ಮಾಡಿದರು. ನಂತರ ಅವರನ್ನು ದೇವಸ್ಥಾನದ ಅರ್ಚಕರು ಸನ್ಮಾನಿಸಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ದತ್ತಾತ್ರೇ ಮಹಾರಾಜರ ದೇವಸ್ಥಾನಕ್ಕೆ ಬಂದಿರುವ ಕುರಿತು ಅಲ್ಲಿ ಅರ್ಚಕರು ಮಾಹಿತಿ ನೀಡಿ, ತಮ್ಮ ಕುಟುಂಬಕ್ಕೆ ಬಂದಿರುವ ಸಂಕಷ್ಟ ನಿವಾರಣೆಯಾಗಲೆಂದು ದೇವಲ ಗಾಣಗಾಪುರ ದತ್ತ ಮಹಾರಾಜರ ದರ್ಶನಕ್ಕೆ ಬಂದಿದ್ದೇನೆ. ನಾನು ಮೇಲಿಂದ ಮೇಲೆ ದತ್ತ ಮಹಾರಾಜರ ದೇವಸ್ಥಾನಕ್ಕೆ ಬರುತ್ತಲೇ ಇರುತ್ತೇನೆ. ನಾನು ಇಲ್ಲಿಗೆ ಬಂದಾಗ ನನ್ನ ಮನಸ್ಸಿಗೆ ಶಾಂತಿ ಸಮಾಧಾನ ದೊರೆಯುತ್ತದೆ. ನಮ್ಮ ಕಷ್ಟಗಳು ನಿವಾರಣೆ ಆಗುತ್ತವೆ ಎಂದು ತಿಳಿಸಿದರು’ ಎಂದು ಅರ್ಚಕರು ಹೇಳಿದರು.
ಪಕ್ಷದ ಮುಖಂಡ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹಾಗೂ ಸೇಡಂ ತಾಲ್ಲೂಕಿನ ಬಾಲರಾಜ ಅಶೋಕ ಗುತ್ತೇದಾರ ಮತ್ತು ಅರ್ಚಕರಾದ ವಿನಾಯಕ್ ಭಟ್ ಪೂಜಾರಿ, ತಮ್ಮಣ್ಣ ಭಟ್ ಪೂಜಾರಿ, ಪ್ರಿಯಾಂಕ್ ಭಟ್ ಪೂಜಾರಿ, ಸಚಿನ್ ಭಟ್ ಪೂಜಾರಿ ಹಾಗೂ ದೇವಸ್ಥಾನದ ಅಧಿಕಾರಿಗಳಾದ ದತ್ತು ನಿಂಬರಗಿ ಮತ್ತಿತರರು ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.