ಅಫಜಲಪುರ: ತಾಲ್ಲೂಕಿನ ಸ್ಟೇಷನ್ ಗಾಣಗಾಪುರದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಮಕ್ಕಳಿಗೆ ವಿತರಿಸುವ ಹಾಲಿನ ಪೌಡರ್ ಪ್ಯಾಕೆಟ್‌ಗಳನ್ನು ಕದ್ದು ಒಯ್ದ ಆರೋಪದ ಮೇಲೆ ಮುಖ್ಯ ಶಿಕ್ಷಕ ಖಾಜಪ್ಪ ದೊಡ್ಡಮನಿ ಅವರನ್ನು ಅಮಾನತು ಮಾಡಲಾಗಿದೆ.
ಶಾಲೆಯಿಂದ ಪ್ಯಾಕೆಟ್‌ಗಳನ್ನು ಕದ್ದುಕೊಂಡು ಖಾಜಪ್ಪ ದೊಡ್ಡಮನಿ ಮನೆಗೆ ಸಾಗಿಸುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದರು. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಪಾಟೀಲ ಅವರು ಪರಿಶೀಲನೆಗಾಗಿ ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿದ್ದರು. ಸಮಿತಿಯವರು ತಯಾರಿಸಿದ ವರದಿಯನ್ನು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ ಅವರಿಗೆ ಕಳುಹಿಸಲಾಗಿತ್ತು.
ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಹಾಲಿನ ಪೌಡರ್ ಪ್ಯಾಕೆಟ್‌ಗಳನ್ನು ಶಾಲೆಯಿಂದ ಹೊರಸಾಗಿಸುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ವರದಿಯನ್ನು ಆಧರಿಸಿ ಡಿಡಿಪಿಐ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.