ADVERTISEMENT

15 ವರ್ಷಗಳಿಂದ ಮುಖ್ಯಶಿಕ್ಷಕ ಹುದ್ದೆ ಖಾಲಿ: ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ

ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:59 IST
Last Updated 21 ನವೆಂಬರ್ 2025, 6:59 IST
ಕಾಯಂ ಮುಖ್ಯಶಿಕ್ಷಕರಿಲ್ಲದ ಕಾಳಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ
ಕಾಯಂ ಮುಖ್ಯಶಿಕ್ಷಕರಿಲ್ಲದ ಕಾಳಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ   

ಕಾಳಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ (ಕನ್ನಡ ಮತ್ತು ಉರ್ದು ಮಾಧ್ಯಮ) 2010ರಿಂದ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದೆ.

ಶಾಲೆಯ ಆಡಳಿತದ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದ್ದರೂ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೂ ಶಾಲಾ ಶಿಕ್ಷಣ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ಮುಂಚೆ ಒಂದೇ ಕಟ್ಟಡ ಸಂಕೀರ್ಣದಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿ ನಡೆಯುತ್ತಿದ್ದವು. 8ರಿಂದ 10ನೇ ತರಗತಿಗೆ ಶಿಕ್ಷಕರು ಪಾಠ ಮಾಡಿದರೆ, ಪಿಯುಸಿಗೆ ಉಪನ್ಯಾಸಕರು ಬೋಧನೆ ಮಾಡುತ್ತಿದ್ದರು.

ADVERTISEMENT

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರೇ ಎರಡು ವಿಭಾಗದ (ಪ್ರೌಢ ಮತ್ತು ಪಿಯು) ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, 1ನೇ ಜೂನ್ 2010ರಿಂದ ಪಿಯು ಮತ್ತು ಪ್ರೌಢಶಾಲೆ ಪ್ರತ್ಯೇಕವಾಗಿ ಮೊದಲಿದ್ದ ಪ್ರಾಚಾರ್ಯರು ಕೇವಲ ಕಾಲೇಜು ಆಡಳಿತಕ್ಕೆ ಸೀಮಿತಗೊಂಡಿದ್ದಾರೆ.

ಆ ವೇಳೆ ಪ್ರೌಢಶಾಲೆಯ ಜವಾಬ್ದಾರಿಯನ್ನು ಹಿರಿಯ ಶಿಕ್ಷಕರಿಗೆ ಪ್ರಭಾರ ವಹಿಸಲಾಗಿದೆ. ಆ ಬಳಿಕ 2011–12ರಲ್ಲಿ ಇಲ್ಲಿನ 8ನೇ ತರಗತಿಯನ್ನು ಊರೊಳಗಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಿ, ಪ್ರೌಢಶಾಲೆಗೆ 9ನೇ ಮತ್ತು 10ನೇ ತರಗತಿ ಮಾತ್ರ ಉಳಿಸಲಾಗಿದೆ.

ಕಾಲ ಕ್ರಮೇಣ 4ನೇ ಸೆಪ್ಟೆಂಬರ್ 2012ರ ಜುಲೈ 22ರಿಂದ 2014ರವರೆಗೆ ‘ಉಪ ಪ್ರಾಂಶುಪಾಲರು’ ಎಂಬ ಹೊಸ ಹುದ್ದೆ ಸೃಷ್ಟಿಯಾಗಿ ಭಾರತಿ ದೊಡ್ಡಮನಿ ಅವರು ಶಾಲಾ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. ಆದರೆ, ಈ ಸ್ಥಾನ ಉಪ ಪ್ರಾಂಶುಪಾಲರ ಹುದ್ದೆ ಅವರಿಗೆ ಕೊನೆಯಾಗಿದೆ.

ಆ ಬಳಿಕ ಇದ್ದ ಶಿಕ್ಷಕರಲ್ಲೇ ಹಿರಿಯ ಶಿಕ್ಷಕರೊಬ್ಬರು ಪ್ರಭಾರ ವಹಿಸಿಕೊಂಡು ಬರುತ್ತಿದ್ದಾರೆ. ಯಾರಾದರೂ ಹುದ್ದೆ ತೆಗೆದುಕೊಳ್ಳಬೇಕೆಂದರೆ ಅಷ್ಟು ವರ್ಷ ಹುದ್ದೆ ಮಂಜೂರಾತಿಯೇ ತೋರಿಸಿಲ್ಲ ಎನ್ನಲಾಗಿದೆ.

ಈ ಮಧ್ಯೆ ಸರ್ಕಾರ 2024ರ ನವೆಂಬರ್ 3ರಂದು ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ಆಡಳಿತ ಉಪನಿರ್ದೇಶಕರ ಕಚೇರಿಯ ‘ಗ್ರೂಪ್-ಬಿ’ ಉಪನ್ಯಾಸಕರ ಹುದ್ದೆಯನ್ನು ಈ ಶಾಲೆಗೆ ಸ್ಥಳಾಂತರಿಸಿ ಆದೇಶಿಸಿದ್ದು, ಶಾಲೆಗೆ ಸ್ವಲ್ಪ ಚೈತನ್ಯ ಬಂದಂತೆ ಆಗಿತ್ತು.

ಹೀಗಿದ್ದರೂ ಈಚೆಗೆ ನಡೆದ ಖಾಲಿ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಪಟ್ಟಿಯಲ್ಲಿ ಇಲ್ಲಿನ ‘ಮುಖ್ಯಶಿಕ್ಷಕರ ಖಾಲಿ ಹುದ್ದೆ’ ತೋರಿಸದಿದ್ದಕ್ಕೆ ಇಲ್ಲಿಗೆ ಯಾರೊಬ್ಬರು ಬರಲು ಸಾಧ್ಯವಾಗಿಲ್ಲ. ಇದರಿಂದ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಕೇವಲ ಎರಡೇ ತರಗತಿಗೆ 160 ಮಕ್ಕಳು ಇರುವ ಈ ಶಾಲೆಯಲ್ಲಿ ಇಷ್ಟು ವರ್ಷವಾದರೂ ಕಾಯಂ ಮುಖ್ಯಶಿಕ್ಷಕರು ಇಲ್ಲ. ಜತೆಗೆ ಕ್ಲರ್ಕ್ ಮತ್ತು ಕರ್ಮಚಾರಿ ಇಲ್ಲ ಎಂದರೆ, ಶಾಲಾ ಆಡಳಿತ ಹೇಗೆ ನಡೆಯುತ್ತದೆ? ಮಕ್ಕಳ ವಿದ್ಯಾಭ್ಯಾಸದ ಪರಿಸ್ಥಿತಿ ಹೇಗೆ? ಎಂದು ಎಸ್‌ಡಿಎಂಸಿ ಪದಾಧಿಕಾರಿಗಳು ಪ್ರಶ್ನಿಸಿ, ಮೇಲಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

‘ಮುಂದಿನವಾರ ನಡೆಯಲಿರುವ ಕೌನ್ಸೆಲಿಂಗ್‌ನಲ್ಲಿ ಸಾಮಾನ್ಯ ವರ್ಗಾವಣೆ ಪಟ್ಟಿಯಲ್ಲಿ ಈ ಖಾಲಿ ಹುದ್ದೆಯನ್ನು ತೋರಿಸಲಾಗಿದೆ. ಯಾರಾದರೂ ಈ ಹುದ್ದೆ ತೆಗೆದುಕೊಂಡು ಬಹುವರ್ಷಗಳಿಂದ ಖಾಲಿಯಿದ್ದ ಕಾಯಂ ಮುಖ್ಯಶಿಕ್ಷಕರ ಕೊರಗು ನೀಗಿಸಲಿದ್ದಾರೆ’ ಎಂದು ಡಿಡಿಪಿಐ ಸೂರ್ಯಕಾಂತ ಮದಾನೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಕ ಶಿವಕುಮಾರ ಶಾಸ್ತ್ರಿ ಅವರಿಂದ ವಿಷಯ ಗೊತ್ತಾಗಿ ಮುಖ್ಯಶಿಕ್ಷಕ ಖಾಲಿ ಹುದ್ದೆ ಭರ್ತಿಗೆ ಕೂಡಲೇ ಅಗತ್ಯಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಜಗದೇವ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.