
ಕಲಬುರಗಿ: ‘ಜಿಲ್ಲೆಯ ಪ್ರತಿ ಶಾಲೆಯೂ ನೂರಕ್ಕೆ ನೂರು ಫಲಿತಾಂಶ ಪಡೆಯುವ ಗುರಿ ಹೊಂದಿರಬೇಕು. ಕೇವಲ ತೇರ್ಗಡೆ ಮುಖ್ಯವಲ್ಲ, ವಿದ್ಯಾರ್ಥಿಗಳು ಪಡೆಯುವ ಅಂಕಗಳ ಗುಣಮಟ್ಟವೂ ಸುಧಾರಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯಗುರುಗಳಿಗೆ ಹಮ್ಮಿಕೊಂಡಿದ್ದ 2025–26ನೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪೂರ್ವಸಿದ್ಧತಾ ಪರೀಕ್ಷೆ–1ರ ಫಲಿತಾಂಶ ವಿಶ್ಲೇಷಣೆಯ ತಾಲ್ಲೂಕುವಾರು ಮತ್ತು ಶಾಲಾವಾರು ಮಾಹಿತಿ ಪಡೆದ ಅವರು, ‘ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ–2 ಮತ್ತು 3 ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳು ಚೆನ್ನಾಗಿ ಬರೆಯುವಂತಾಗಲು ಶಿಕ್ಷಕರು ಪ್ರಯತ್ನಿಸಬೇಕು. ಫಲಿತಾಂಶ ಸುಧಾರಣೆ ಡಿಡಿಪಿಐ, ಡಯಟ್, ಬಿಇಒ ಮಾಡಬೇಕಾಗಿರುವ ಕೆಲಸ ಅಲ್ಲ. ಎಲ್ಲ ಶಿಕ್ಷಕರು ಮಾಡಬೇಕಾಗಿರುವ ಕೆಲಸ’ ಎಂದರು.
ಸರ್ಕಾರಿ ಅನುದಾನಿತ ಮತ್ತು ಅನುದಾನಿತ ರಹಿತ ಶಾಲೆಯಿಂದ ಹಾಜರಾಗದ ಮುಖ್ಯಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ ಅವರಿಗೆ ಸೂಚಿಸಿದರು.
‘ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆದು ಅವರಿಗೆ ವಿಶೇಷ ತರಬೇತಿ ನೀಡಬೇಕು. ಕಳೆದ 1 ವರ್ಷದಿಂದ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆ ಕಡಿಮೆ ಸ್ಥಾನ ಪಡೆದಿದ್ದು, ಅದನ್ನು ಸುಧಾರಿಸಲು ಕ್ರಮವಹಿಸಿ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಮಾತನಾಡಿ, ‘ಮೈಕ್ರೊ ಪ್ಲಾನ್ ಮಾಡಿಕೊಳ್ಳಿ, ಸರ್ಕಾರದ ಸುತ್ತೋಲೆಯ ಅಂಶಗಳನ್ನು ಪ್ರಾಕ್ಟಿಸ್ ಮಾಡಿಸಿ. ಸರ್ಕಾರದ ಕಾರ್ಯಕ್ರಮಗಳಾದ 29 ಅಂಶಗಳು, 40+ ಮಿಷನ್ ಅನುಸರಿಸಿ ಹಾಗೂ ನೀಲನಕ್ಷೆ ಪ್ರಕಾರ ಅಭ್ಯಾಸ ಮಾಡಿಸಿ. ಸಾಧ್ಯವಾದಲ್ಲಿ ನಾವು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಪರೀಕ್ಷೆಗೆ ವಿವಿಧ ಸಹಾಯಕಾರಿ ಬೋಧನಾ ಅಂಶಗಳನ್ನು ಕೊಡುವ ಪ್ರಯತ್ನ ಮಾಡುತ್ತೇವೆ’ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲೆಯ, ಕಲಬುರಗಿ ವಿಭಾಗದ ತಾಲ್ಲೂಕುಗಳ ಶಾಲೆಗಳ ಮಾಹಿತಿ, ಫಲಿತಾಂಶಗಳು, ವಿದ್ಯಾರ್ಥಿಗಳ ಉತ್ತೀರ್ಣ, ಅನುತ್ತೀರ್ಣ ಮುಂತಾದ ಅಂಶಗಳನ್ನು ಪಿ.ಪಿ.ಟಿ. ಮೂಲಕ ವಿವರಿಸಲಾಯಿತು.
ಡಯಟ್ ಕಾಲೇಜಿನ ಪ್ರ್ರಾಚಾರ್ಯ ಬಸವರಾಜ ಶೆಟ್ಟಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ಪೋಷಕರ ಸಭೆ ಕರೆಯಿರಿ’ ‘ಪರೀಕ್ಷೆಗೆ ಇನ್ನೂ 54 ದಿನ ಮಾತ್ರ ಉಳಿದಿವೆ. ಇದರಲ್ಲಿ ನಿಮ್ಮ ಶ್ರಮ ಅಗತ್ಯವಿದೆ. ಮಕ್ಕಳ ಪ್ರಗತಿಯ ಬಗ್ಗೆ ಚರ್ಚಿಸಲು ನಿಯಮಿತವಾಗಿ ಪೋಷಕರ ಸಭೆ ಕರೆದು ಮನೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ಇರುವಂತೆ ನೋಡಿಕೊಳ್ಳಲು ಅವರಿಗೆ ಮನವರಿಕೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಹೇಳಿದರು. ‘ಶಿಕ್ಷಣವು ಸಮಾಜದ ಬೆನ್ನೆಲುಬು. ಎಸ್‍ಎಸ್‍ಎಲ್‍ಸಿ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯದ ದಾರಿಯನ್ನು ನಿರ್ಧರಿಸುತ್ತದೆ. ಹೀಗಾಗಿ ಜಿಲ್ಲೆಯ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮುಖ್ಯಗುರುಗಳು ಕಾರ್ಯ ನಿರ್ವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.