ADVERTISEMENT

ಐದೂವರೆ ತಿಂಗಳಲ್ಲಿ 2,196 ಜನರಿಗೆ ಹಠಾತ್ ಹೃದಯಾಘಾತ!

ಐದೂವರೆ ತಿಂಗಳಲ್ಲಿ ಜಯದೇವ ಆಸ್ಪತ್ರೆಯಲ್ಲಿ 104 ಸಾವು; 2,092 ಮಂದಿ ಗುಣಮುಖ

ಮಲ್ಲಿಕಾರ್ಜುನ ನಾಲವಾರ
Published 3 ಜುಲೈ 2025, 7:37 IST
Last Updated 3 ಜುಲೈ 2025, 7:37 IST
ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆ
ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆ   

ಕಲಬುರಗಿ: ಕಳೆದ ಐದೂವರೆ ತಿಂಗಳಲ್ಲಿ ಹಠಾತ್ ಹೃದಯಾಘಾತದಿಂದ 2,196 ರೋಗಿಗಳು ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 104 ಮಂದಿ ಮೃತಪಟ್ಟಿದ್ದಾರೆ.

ಅಪಾಯಕಾರಿ ಅಲ್ಲದ ಹೃದಯ ಸಂಬಂಧಿತ ನೋವಿನಿಂದ 733 ಮಂದಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಹೃದಯಾಘಾತಕ್ಕೆ ತುತ್ತಾಗಿ 1,463 ರೋಗಿಗಳು ಚಿಕಿತ್ಸೆಗೆ ಬಂದಿದ್ದರು. ಅವರಲ್ಲಿ 104 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ಮರಣವನ್ನಪ್ಪಿದ್ದಾರೆ.

ತೀವ್ರ ಹೃದಯಾಘಾತದಿಂದಾಗಿ ಜನವರಿಯಲ್ಲಿ 11, ಫೆಬ್ರುವರಿಯಲ್ಲಿ 19, ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ತಲಾ 21, ಮೇ ತಿಂಗಳಲ್ಲಿ 23 ಮಂದಿ ಉಸಿರು ಚೆಲ್ಲಿದ್ದಾರೆ. ಜೂನ್ ತಿಂಗಳ ಆರಂಭಿಕ ಎರಡು ವಾರಗಳಲ್ಲಿ ಒಂಬತ್ತು ಮಂದಿ ಅಸುನೀಗಿದ್ದಾರೆ.

ADVERTISEMENT

‘ಹಗುರ ಮತ್ತು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿ ಸಾವನ್ನಪ್ಪುವವರ ಪ್ರಮಾಣವು ಶೇ 5ರಿಂದ 7ರಷ್ಟಿದೆ. ಇದು ಅಂತರರಾಷ್ಟ್ರೀಯ ಮಟ್ಟಕ್ಕೆ ಸರಿಸಮನಾಗಿ ಇರುವುದರಿಂದ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದರೂ ಜನರು ತಮ್ಮ ಹೃದಯದ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡುವುದು ಅಗತ್ಯವಿದೆ’ ಎನ್ನುತ್ತಾರೆ ಜಯದೇವ ಆಸ್ಪತ್ರೆಯ ವೈದ್ಯರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 102 ಜನರಿಗೆ ತೀವ್ರ ಹೃದಯಾಘಾತ ಸಂಭವಿಸಿತ್ತು. ಅವರಲ್ಲಿ 6 ಮಂದಿ ಹೃದಯಾಘಾತದಿಂದ ಕಣ್ಣು ಮುಚ್ಚಿದ್ದಾರೆ. ಸೇಡಂನಲ್ಲಿಯೇ ಅತ್ಯಧಿಕ 33 ಮಂದಿಗೆ ಹೃದಯಘಾತವಾಗಿದ್ದು, ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಆಳಂದ ಮತ್ತು ಜೇವರ್ಗಿಯಲ್ಲಿ ಕ್ರಮವಾಗಿ 6 ಮತ್ತು 19 ಮಂದಿಗೆ ಹೃದಯಾಘಾತವಾಗಿದ್ದು, ತಲಾ ಒಬ್ಬೊಬ್ಬರು ಅಸುನೀಗಿದ್ದಾರೆ. ಉಳಿದಂತೆ ಚಿಂಚೋಳಿಯಲ್ಲಿ 28, ಚಿತ್ತಾಪುರದಲ್ಲಿ 13 ಹಾಗೂ ಅಫಜಲಪುರದಲ್ಲಿ ಮೂವರಿಗೆ ಹೃದಯಾಘಾತವಾಗಿದ್ದರೂ ಜೀವ ಹಾನಿಯಾಗಿಲ್ಲ ಎನ್ನುತ್ತಾರೆ ವೈದ್ಯರು.

ಕಲಬುರಗಿ ಶಾಖೆಯ ಜಯದೇವ ಆಸ್ಪತ್ರೆಗೆ ನೆರೆಯ ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಿಂದ ನಿತ್ಯ ನೂರಾರು ರೋಗಿಗಳು ಹೃದಯ ಸಂಬಂಧಿತ ತಪಾಸಣೆ ಹಾಗೂ ಚಿಕಿತ್ಸೆಗೆ ಬರುತ್ತಿದ್ದಾರೆ. ಎರಡು ವಾರಗಳಿಂದ ಆಸ್ಪತ್ರೆಯ ಆವರಣದಲ್ಲಿ ಜನಸಂದಣಿಯೂ ಹೆಚ್ಚಾಗಿದೆ. ಇದಕ್ಕೆ ಕಾರಣ, ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕಣಗಳ ಹೆಚ್ಚಳದ ಬಿಸಿ. ಅದು, ಕಲಬುರಗಿಗೂ ತಟ್ಟಿದೆ.

ಸಣ್ಣ–ಪುಟ್ಟ ಎದೆ ನೋವು ಕಾಣಿಸಿಕೊಂಡರು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳ ಹೃದ್ರೋಗ ತಜ್ಞರ ಭೇಟಿ ಮಾಡುತ್ತಿದ್ದಾರೆ. ವೈದ್ಯರು ಗಂಭೀರ ಸಮಸ್ಯೆ ಇಲ್ಲವೆಂದರೂ ರೋಗಿಗಳು ತಮ್ಮಲ್ಲಿನ ಆತಂಕವನ್ನು ದೂರ ಮಾಡಿಕೊಳ್ಳಲು ಇಸಿಜಿ, 2ಡಿ ಇಕೊ ತಪಾಸಣೆಯ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಡಾ.ವೀರೇಶ ಪಾಟೀಲ
ಡಾ.ಅರುಣ್ ಕುಮಾರ್ ಹರಿದಾಸ್

ಜಯದೇವ ಆಸ್ಪತ್ರೆಗೆ ಕಳೆದ ಎರಡು ವಾರಗಳಿಂದ ಒಪಿಡಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಹೃದಯ ಸಂಬಂಧಿತ ಚಿಕಿತ್ಸೆ ಕೊಡುವಂತೆ ಕೋರುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ

ಡಾ.ವೀರೇಶ ಪಾಟೀಲ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಪ್ರಭಾರ)

‘ಹೃದಯದ ಆಯಸ್ಸು ತೀವ್ರ ಕ್ಷೀಣ’

‘ಒತ್ತಡ ಜೀವನಶೈಲಿ ಆಹಾರ ಕ್ರಮದಲ್ಲಿನ ಬದಲಾವಣೆ ಪರಿಸರ ಮಾಲಿನ್ಯ ಹಾಗೂ ದುಶ್ಚಟಗಳಿಂದಾಗಿ ದೇಹದ ಅಂಗಾಂಗಳ ಆಯಸ್ಸು ಕ್ಷೀಣಿಸುತ್ತಿದೆ. ಅವುಗಳ ಪೈಕಿ ಹೃದಯದ ಆಯಸ್ಸು ತೀವ್ರವಾಗಿ ಕ್ಷೀಣಿಸಿ 40ನೇ ವರ್ಷಕ್ಕೆ 50ರ ವಯೋಮಾನದವರಂತೆ ವರ್ತಿಸುತ್ತಿದೆ’ ಎನ್ನುತ್ತಾರೆ ಹೃದಯ ರೋಗ ತಜ್ಞ ಡಾ. ಅರುಣ್ ಕುಮಾರ್ ಹರಿದಾಸ್. ‘ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿತ ಸಾವುಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುತ್ತಿದೆ. ಕೆಲಸದ ಒತ್ತಡ ಕಡಿಮೆ ನಿದ್ರೆ ಅನಾರೋಗ್ಯಕರ ಆಹಾರ ಪದ್ಧತಿ ಅತಿಯಾದ ವ್ಯಾಯಾಮ ಬೊಜ್ಜು ಸಹ ಹೃದಯಾಘಾತಕ್ಕೆ ಕಾರಣವಾಗುತ್ತಿವೆ’ ಎಂದರು. ‘ಕೋವಿಡ್ ಬಳಿಕ ಜನರಲ್ಲಿಯೂ ಹೃದಯ ಸಂಬಂಧಿತ ನೋವಿನ ಬಗ್ಗೆ ಅರಿವು ಮೂಡುತ್ತಿದೆ. ಸಣ್ಣ ನೋವು ಕಾಣಿಸಿಕೊಂಡರು ತಕ್ಷಣವೇ ಇಸಿಜಿ ಮಾಡಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.