ADVERTISEMENT

ಮುಂದುವರೆದ ಲಾಲ್ ಅಹ್ಮದ್ ಮುತ್ಯಾನ ಗೋರಿ ಬಡಿತ!

ಗುಂಡಪ್ಪ ಕರೆಮನೋರ
Published 6 ನವೆಂಬರ್ 2019, 20:00 IST
Last Updated 6 ನವೆಂಬರ್ 2019, 20:00 IST
 ಕಾಳಗಿ ಪಟ್ಟಣದ ಲಾಲ್ ಅಹ್ಮದ್ ಮುತ್ಯಾನ ದರ್ಗಾದ ಅಸ್ತವ್ಯಸ್ತತೆ
 ಕಾಳಗಿ ಪಟ್ಟಣದ ಲಾಲ್ ಅಹ್ಮದ್ ಮುತ್ಯಾನ ದರ್ಗಾದ ಅಸ್ತವ್ಯಸ್ತತೆ   

ಕಾಳಗಿ: ಅ.28ರಿಂದ ಆಗಾಗ ನಡೆಯುತ್ತಿರುವ ಇಲ್ಲಿನ ಲಾಲ್ ಅಹ್ಮದ್ ಮುತ್ಯಾನ ಗೋರಿ ಮೇಲ್ಭಾಗದ ಬಡಿತದ ಘಟನೆ ಈಗಲೂ ರಾತ್ರಿ ವೇಳೆ ಅಲ್ಪ ಪ್ರಮಾಣದಲ್ಲೂ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

ಈ ಬಡಿತದ ಒಳಗುಟ್ಟು ಎಷ್ಟರ ಮಟ್ಟಿಗೆ ಸರಿಯೋ ಮತ್ತು ಊರಿಗೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯದಾಗಿದೆ. ಆದರೆ, ವ್ಯಕ್ತಿಯೊಬ್ಬರ ಮೈಯಲ್ಲಿ ಮುತ್ಯಾ ಸವಾರಿ ಮಾಡಿ ವಿಶೇಷ ಪೂಜೆ, ಶಾಂತಿ ಮಾಡಲು ತಿಳಿಸಿದ್ದಾರೆ ಎಂಬ ವಿಚಾರವಾಗಿ ಭಕ್ತರು ಭಾನುವಾರ ಸಭೆ ನಡೆಸಿದ್ದಾರೆ.

ಊರಿನ ಎಲ್ಲಾ ಜನರು ಸೇರಿಕೊಂಡು ಮುತ್ಯಾರ ಇಚ್ಛೆ ಪೂರ್ಣಗೊಳಿಸಲು ತೀರ್ಮಾನಿಸಿ ಕಾಣಿಕೆ ಸಂಗ್ರಹಿಸಲು ಕೆಲಜನರ ತಂಡ ಓಡಾಡುತ್ತಿದೆ. ಅನೇಕರು ಕಾಣಿಕೆ ನೀಡುತ್ತಿದ್ದರೆ, ಕೆಲವರು ಹಿಂಜರಿಯುತ್ತಿದ್ದಾರೆ.

ADVERTISEMENT

ಮುತ್ಯಾ ಸತ್ಯವಂತನಾಗಿದ್ದಾನೆ ಅವನಿಗೆ ನಮ್ಮ ಭಕ್ತಿ ಸಲ್ಲಬೇಕು ನಿಜ. ಅದಕ್ಕೆಂದೆ ಪ್ರತಿವರ್ಷ ದರ್ಗಾದಲ್ಲಿ ಜಾತ್ರೆ ನಡೆಯುತ್ತದೆ. ಭಕ್ತರು ತಮ್ಮ ಇಷ್ಟದಂತೆ ಕಾಯಿಕರ್ಪೂರ, ಹೂಹಾರ, ನೈವೇದ್ಯ, ಹರಕೆ ಸಲ್ಲಿಸುವ ಪದ್ದತಿ ಸಂಪ್ರದಾಯವಾಗಿ ಬಿಟ್ಟಿದೆ.

ಆದರೆ, ಮುತ್ಯಾನ ಗೋರಿ ನಿರ್ಮಾಣವಾಗಿ ನಾಲ್ಕುದಶಕಗಳೇ ಕಳೆದಿವೆ. ದರ್ಗಾ ಮಾತ್ರ ಯಾವ ಬದಲಾವಣೆ ಕಾಣದೆ ಹಾಳು ಕೊಂಪೆಯಂತೆ ಅನಾಥವಾಗಿ ಉಳಿದಿದೆ. ಎಲ್ಲೆಂದರಲ್ಲಿ ಕಲ್ಲು, ಮಣ್ಣು, ಪರ್ಸಿ, ಕಟ್ಟಿಗೆ, ಚಿಂದಿ ಬಿದ್ದಿವೆ. ಕಟ್ಟೆ ಜಾಗ ಹಿಡಿದುಕೊಂಡಿದೆ. ಮುಂಭಾಗದ ಅಲ್ಲಲ್ಲಿ ಕೊಳಚೆ ನೀರು, ಮಣ್ಣಿನ ಕೆಸರು, ಇನ್ನೊಂದು ಭಾಗದಲ್ಲಿ ಕಸದ ತಿಪ್ಪೆಗುಂಡಿ ನಿರ್ಮಾಣವಾಗಿದೆ. ಊರೊಳಗಿನ ಕೊಳಚೆ ಕೆಸರು ಇಲ್ಲಿ ಗುಡ್ಡೆ ಹಾಕಲಾಗಿದೆ. ಹಂದಿ, ನಾಯಿಗಳು ರಾಜಾರೋಷವಾಗಿ ಓಡಾಡಿಕೊಂಡು ಇಲ್ಲಿಗೆ ಬಂದು ಹೋಗುತ್ತವೆ. ಅವಾಗವಾಗ ದುಶ್ಚಟಗಳು ನಡೆದು ‘ಮುತ್ಯಾನ ಕೀರ್ತಿ’ಗೆ ಭಂಗ ತರುವಂಥ ಚಟುವಟಿಕೆಗಳು ಇಲ್ಲಿ ಸಾಮಾನ್ಯವಾಗಿ, ಭಯ-ಭಕ್ತಿಯಿಂದ ಪ್ರಾರ್ಥನೆ ಮಾಡುವ ಜನತೆಗೆ ಪ್ರಶಾಂತ ಸ್ಥಳ ಇಲ್ಲದಂತಾಗಿದೆ.

ಕಾರಣ ಪ್ರಮುಖರು ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ದರ್ಗಾದ ಅಭಿವೃದ್ಧಿ ಕಡೆಗೆ ಮೊದಲ ಪ್ರಾಶಸ್ತ್ಯ ಕೊಡಬೇಕು. ಉಳಿದಿದನ್ನು ನಂತರದಲ್ಲಿ ಯೋಚಿಸಬೇಕು. ಈ ಎಲ್ಲವನ್ನು ಅಲ್ಲಿಂದಲ್ಲೆ ಬಿಟ್ಟು, ನಿಜವಾದ ಸತ್ಯಾಂಶ ಅರಿಯದೆ ಮತ್ತು ಗೋರಿ ಬಡಿತದ ಒಳ ಮರ್ಮವನ್ನು ಹೊಕ್ಕು ನೋಡದೆ ಶಾಂತಿ, ಪೂಜೆ ಯಾರ ಪುರುಷಾರ್ಥಕ್ಕಾಗಿ ಎಂಬ ಮಾತುಗಳು ಜನವಲಯದಲ್ಲಿ ಕೇಳಿಬರುತ್ತಿವೆ.

ಸಂಗ್ರಹವಾಗುವ ಭಕ್ತರ ಕಾಣಿಕೆಯನ್ನು ದುಂದುವೆಚ್ಚ ಮಾಡುವ ಬದಲು ದರ್ಗಾದ ಅಭಿವೃದ್ಧಿಗೆ ಉಪಯೋಗಿಸಿ, ಇದೊಂದು ಭಾವೈಕ್ಯತೆಯ ಪವಿತ್ರ ತಾಣವನ್ನಾಗಿ ಪರಿವರ್ತಿಸಿದರೆ ಮುತ್ಯಾನ ಆತ್ಮಕ್ಕೆ ಅದುವೇ ನಿಜವಾದ ಶಾಂತಿ, ಪೂಜೆ ಸಲ್ಲಿಸಿದಂತಾಗುತ್ತದೆ. ಈ ಕುರಿತು ಸಂಬಂಧಿತರು ಯೋಚಿಸಬೇಕು ಎಂದು ಪ್ರಜ್ಞಾವಂತ ಜನರು ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.