ಕಲಬುರಗಿ: ಕಳೆದ ಎರಡು ವಾರಗಳಿಂದ ಬಿಸಿಲಿನ ಝಳಕ್ಕೆ ಕಲ್ಯಾಣ ಕರ್ನಾಟಕದ ನೆಲ ರೊಟ್ಟಿ ‘ಸುಡುವ’ ಹೆಂಚಿನಂತೆ ಕಾಯುತ್ತಿದೆ. ಶಾಖದ ಅಲೆಗಳು (ಹೀಟ್ ವೇವ್) ‘ಸುನಾಮಿ’ಯಂತೆ ಅಪ್ಪಳಿಸುತ್ತಿದ್ದು, ‘ಕಲ್ಯಾಣ’ಕ್ಕೆ ಸೀಮಿತವಾಗಿ ‘ರಾಜ್ಯ ನಿರ್ದಿಷ್ಟ ವಿಪತ್ತು’ ಘೋಷಿಸಿ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.
ಕಲ್ಯಾಣ ಕರ್ನಾಟಕದಂತೆ ಸಮಾನ ಹವಾಮಾನ ಪ್ರದೇಶವನ್ನು ತೆಲಂಗಾಣವೂ ಹೊಂದಿದೆ. ಅಲ್ಲಿನ ಸರ್ಕಾರವು ಕೆಲವು ಜಿಲ್ಲೆಗಳಲ್ಲಿ ‘ರಾಜ್ಯ ನಿರ್ದಿಷ್ಟ ವಿಪತ್ತು’ ಎಂದು ಘೋಷಣೆ ಮಾಡಿದೆ. ಹೀಟ್ ವೇವ್‌ನಿಂದ ಮೃತರಾದವರ ಕುಟುಂಬಸ್ಥರಿಗೆ ₹ 4 ಲಕ್ಷ ಪರಿಹಾರವನ್ನೂ ನಿಗದಿ ಮಾಡಿದೆ. ಸೂರ್ಯಾಘಾತದಿಂದ ಕಂಗೆಟ್ಟಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಅನ್ವಯ ಆಗುವಂತೆ ‘ರಾಜ್ಯ ನಿರ್ದಿಷ್ಟ ವಿಪತ್ತು’ ಘೋಷಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಬೇಡಿಕೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅನ್ವಯ, ಏಪ್ರಿಲ್ 9ರಂದು ರಾಯಚೂರಿನಲ್ಲಿ 42.3, ಕಲಬುರಗಿಯಲ್ಲಿ 41.7, ಬೀದರ್‌ನಲ್ಲಿ 41.8, ಕೊಪ್ಪಳದಲ್ಲಿ 40, ಯಾದಗಿರಿಯಲ್ಲಿ 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ದಿನದಿಂದ ದಿನಕ್ಕೆ ಏರುತ್ತಲೇ ಸಾಗಿರುವ ತಾಪಮಾನ, ಕಳೆದು ಮೂರು ದಿನಗಳ ಅವಧಿಯಲ್ಲಿ ಈ ಜಿಲ್ಲೆಗಳ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಿದೆ.
ಬುಧವಾರ (ಏ. 23) ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಬೀದರ್‌ನಲ್ಲಿ ಅತ್ಯಧಿಕ 44.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ 44, ಯಾದಗಿರಿಯಲ್ಲಿ 43.8, ನೆರೆಯ ವಿಜಯಪುರದಲ್ಲಿ 43.3 ಡಿಗ್ರಿ ಸೆಲ್ಸಿಯಲ್ ತಾಪಮಾನ ದಾಖಲಾಗಿದೆ.
‘ಖಡಕ್ ಬಿಸಿಲಿನಿಂದ ಜನ–ಜಾನುವಾರುಗಳು ತತ್ತರಿಸಿವೆ. ಕೆಂಡದಂತಹ ಬಿಸಿಲಿನ ಝಳಕ್ಕೆ ಜನರು ಹೈರಾಣಾಗುತ್ತಲೆ ಓಡಾಡುತ್ತಿದ್ದಾರೆ. ಕೂಲಿ ಕಾರ್ಮಿಕರು, ಶ್ರಮಿಕ ವರ್ಗದವರು ಖಡಕ್ ಬಿಸಿಲಿನಲ್ಲಿ ತಮ್ಮ ಕೆಲಸಗಳನ್ನು ಮಾಡುವುದು ಅನಿವಾರ್ಯವಾಗಿದೆ. ರಾಜ್ಯ ಸರ್ಕಾರವು ರಾಜ್ಯ ನಿರ್ದಿಷ್ಟ ವಿಪತ್ತು ಪ್ರದೇಶವೆಂದು ಘೋಷಿಸಿ, ಜನರ ರಕ್ಷಣೆಗೆ ಮುಂದಾಗಬೇಕು’ ಎನ್ನುತ್ತಾರೆ ಹೋರಾಟಗಾರ ಲಕ್ಷ್ಮಣ ದಸ್ತಿ.
ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಜತೆಗೆ ಮಾತನಾಡಿ, ‘ತಾಪಮಾನದ ಏರಿಕೆ ಎರಡ್ಮೂರು ದಿನಗಳಿಂದ ವಿಪರೀತವಾಗಿದೆ. ತಾಪಮಾನ ಏರಿಕೆಯ ಬಗ್ಗೆ ನಿತ್ಯವೂ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ರಾಜ್ಯ ನಿರ್ದಿಷ್ಟ ವಿಪತ್ತು ಘೋಷಣೆಯು ಸರ್ಕಾರ ಮತ್ತು ಸಚಿವ ಸಂಪುಟದ ಹಂತದಲ್ಲೇ ತೀರ್ಮಾನ ಆಗಬೇಕಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಿಸಿಲಿನ ತಾಪಮಾನ ಹೆಚ್ಚಳದಿಂದ ತೆಗೆದುಕೊಳ್ಳಬೇಕಾದ ಬಿಸಿಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಅಗತ್ಯ ಸೌಕರ್ಯಗಳು ನೀಡುವಂತೆ ಅಧಿಕಾರಿಗಳಿಗೂ ಸೂಚಿಸಲಾಗಿದೆಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
‘ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’
‘ಮೂರು ದಿನಗಳು 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ ರಾಜ್ಯ ನಿರ್ದಿಷ್ಟ ವಿಪತ್ತು ಪ್ರದೇಶವೆಂದು ಘೋಷಿಸಬೇಕು ಎಂಬ ನಿಯಮದಡಿ ತೆಲಂಗಾಣದಲ್ಲಿ ನಿರ್ದಿಷ್ಟ ವಿಪತ್ತು ಘೋಷಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎನ್ನುತ್ತಾರೆ ನಿವೃತ್ತ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ. ‘ಹೀಟ್ ವೇವ್‌ನಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ವೃದ್ಧರ ಮರಣ ಪ್ರಮಾಣ ಹೆಚ್ಚಾಗುತ್ತದೆ. ಮೃತರ ಸಾವನ್ನು ಹೀಟ್ ವೇವ್ ಅಡಿ ಗುರುತಿಸಿ ಅವರ ಕುಟುಂಬಸ್ಥರಿಗೆ ₹ 4 ಲಕ್ಷ ಪರಿಹಾರ ಕೊಡಬೇಕು. ಸರ್ಕಾರಿ ಮನೆಗಳು ಕಚೇರಿಗಳಿಗೆ ಬಿಳಿ ಬಣ್ಣ ಬಳಿದು ಉಷ್ಣಾಂಶವನ್ನು ತಗ್ಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರು ನೆರಳಿನ ವ್ಯವಸ್ಥೆ ಮಾಡಿ ಹೀಟ್ ವೇವ್ ನಿಭಾಯಿಸಲು ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.