ADVERTISEMENT

ಮಳಖೇಡ ಬಳಿ ತುಂಬಿದ ಕಾಗಿಣಾ ನದಿ: ಸೇಡಂ-ಕಲಬುರ್ಗಿ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 4:36 IST
Last Updated 28 ಸೆಪ್ಟೆಂಬರ್ 2021, 4:36 IST
ಕಲಬುರ್ಗಿ-ಸೇಡಂ ಮಧ್ಯದ‌ ಸಂಪರ್ಕ ‌ಕಡಿತ
ಕಲಬುರ್ಗಿ-ಸೇಡಂ ಮಧ್ಯದ‌ ಸಂಪರ್ಕ ‌ಕಡಿತ   

ಕಲಬುರ್ಗಿ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದ್ದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ರಸ್ತೆ ‌ಸಂಪರ್ಕ‌ ಕಡಿತಗೊಂಡಿದೆ.

ಸೇಡಂ ತಾಲ್ಲೂಕಿನ ಮಳಖೇಡ ಬಳಿ ಕಾಗಿಣಾ‌ ನದಿಯಲ್ಲಿ ಪ್ರವಾಹ ‌ಉಂಟಾಗಿ ಸೇತುವೆ ಮುಳುಗಿದ್ದರಿಂದ ಕಲಬುರ್ಗಿ-ಸೇಡಂ ಮಧ್ಯದ‌ ಸಂಪರ್ಕ ‌ಕಡಿತಗೊಂಡಿದೆ.

ಸೇಡಂನ ಕಮಲಾವತಿ ನದಿಯೂ ಮೈದುಂಬಿ ಹರಿಯುತ್ತಿದೆ. ಭಾರಿ ಮಳೆ ಸುರಿದ ಪರಿಣಾಮ ಹಾಗೂ ನಾಗರಾಳ ಜಲಾಶಯದಿಂದ ನದಿಗೆ ನೀರು ಹರಿದು ಬಂದಿದ್ದರಿಂದ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿದೆ.

ADVERTISEMENT

ಸಂಪರ್ಕ ಸ್ಥಗಿತಗೊಂಡಿದ್ದರಿಂದ ಕಲಬುರ್ಗಿ, ಸೇಡಂ ಮಧ್ಯೆ ಸಂಚರಿಸುವ ಸರ್ಕಾರಿ‌ ನೌಕರರು, ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವಂತಾಗಿದೆ. ಸೇಡಂ-ಮಳಖೇಡ, ಚಿತ್ತಾಪೂರ ಮಾರ್ಗದಿಂದ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಿದ್ದಾರೆ.

ಕಾಗಿಣಾ ಮತ್ತು ಕಮಲಾವತಿ ನದಿ ನೀರಿನಲ್ಲಿ ಪ್ರವಾಹ ಹೆಚ್ಚಿದ್ದರಿಂದ ನದಿಯತ್ತ ಯಾರೂ ಸುಳಿಯದಂತೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಮನವಿ ಮಾಡಿದ್ದಾರೆ.

ನಾಗರಾಳ ಜಲಾಶಯದಿಂದ ನೀರು ಬಿಡುಗಡೆ: ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಮುಲ್ಲಾಮಾರಿ ನದಿ‌ಗೆ ನೀರು ಬಿಡಲಾಗಿದೆ. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು ನದಿ ಉಕ್ಕೇರಿ ಹರಿಯುತ್ತಿದೆ. ಜಲಾಶಯದಿಂದ ರಾತ್ರಿ 3000 ಕ್ಯುಸೆಕ್ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟರೆ, ನಂತರ ಒಳ ಹರಿವು ಏರಿಕೆಯಾಗಿದ್ದರಿಂದ 4 ಗೇಟುಗಳು ತೆರೆದು 4500 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಇದರಿಂದ ಚಿಮ್ಮನಚೋಡ, ಗಾರಂಪಳ್ಳಿ, ಮತ್ತು ತಾಜಲಾಪುರ ಸೇತುವೆಗಳು ಹಾಗೂ ಕನಕಪುರ, ಚಂದಾಪುರ, ಗರಗಪಳ್ಳಿ ಬಾಂದಾರು ಸೇತುವೆಗಳು ಮುಳುಗಿವೆ.

ಜನರಿಗೆ ತೊಂದರೆಯಾಗದಿರಲೆಂದು ನೀರಾವರಿ ಇಲಾಖೆಯ ಯೋಜನಾಧಿಕಾರಿಗಳು ಬೆಳಿಗ್ಗೆ 6 ಗಂಟೆಯಿಂದ 3750 ಕ್ಯುಸೆಕ್ ನೀರು ಬಿಡುತ್ತಿದ್ದಾರೆ. ಮೇಲಿನ ಮೂರು ಸೇತುವೆಗಳ ಸಂಪರ್ಕ ಕಡಿತವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತರಾವ್ ಪೂಜಾರಿ 'ಪ್ರಜಾವಾಣಿ'ಗೆ ತಿಳಿಸಿದರು.

ಕಲಬುರ್ಗಿ, ಕಾಳಗಿ, ಚಿತ್ತಾಪುರ, ಅಫಜಲಪುರ, ಆಳಂದ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದೆ.

ಚಿಂಚೋಳಿ ತಾಲ್ಲೂಕು ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಗೇಟು ಎತ್ತಿ ನೀರು ನದಿಗೆ ಬಿಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.