ಚಿಂಚೋಳಿ: ತಾಲ್ಲೂಕಿನಲ್ಲಿ ಸೋಮವಾರ ಗುಡುಗು ಮಿಂಚು ಸಹಿತ ಜೋರು ಮಳೆಯಾಗಿದೆ. ಮಳೆಗಾಲ ಮುಗಿದರೂ ಮಳೆಯ ಕಾಟ ನಿಂತಿಲ್ಲ ಎಂದು ರೈತರು ಗೊಣಗಾಡುವಂತಾಗಿದೆ.
ತಾಲ್ಲೂಕಿನ ನಿಡಗುಂದಾ, ರುದ್ನೂರು, ಹೂವಿನಹಳ್ಳಿ, ಶಿರೋಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಗಣಾಪುರ, ಕರ್ಚಖೇಡ, ಚತ್ರಸಾಲ ಸೇರಿದಂತೆ ವಿವಿಧೆಡೆ ಜೋರು ಮಳೆ ಸುರಿದಿದೆ. ಇದರಿಂದಾಗಿ ಹಿಂಗಾರು ಬಿತ್ತನೆಗೆ ಕಂಟಕ ಎದುರಾಗಿದೆ. ಬಿರುಸಿನ ಮಳೆ ಸುರಿದಿದ್ದರಿಂದ ಹಳ್ಳತೊರೆಗಳು ತುಂಬಿ ಹರಿದಿವೆ. ರೈತರು ಹಿಂಗಾರು ಬಿತ್ತನೆಗೆ ಸಜ್ಜಾಗಿ ಕೂರಿಗೆ ಪೂಜೆ ನಡೆಸಿ ಮಳೆ ಬಿಡುವು ಕೊಡುವುದನ್ನು ಕಾಯುತ್ತಿದ್ದಾರೆ. ಆದರೆ ಮಳೆ ಕಾಯುತ್ತಿಲ್ಲ. ಈಗಾಗಲೇ ಮಳೆಯಿಂದ ಉದ್ದಿನ ಬೆಳೆ ಸಂಪೂರ್ಣ ಹಾಳಾಗಿದೆ. ತಗ್ಗು ಪ್ರದೇಶದ ಹೊಲಗಳ ತೊಗರಿ ಬೆಳೆ ಮಳೆಗೆ ಆಹುತಿಯಾದರೆ, ಹಿಂಗಾರಿನ ಬಿತ್ತನೆಗೆ ಸಜ್ಜಾದ ರೈತರಿಗೆ ನಿರಂತರ ಸುರಿಯುತ್ತಿರುವ ಮಳೆಯಿಂದ ಬಿತ್ತನೆಗೆ ಅಡ್ಡಿಯಾಗಿದೆ. ಜೋಳ ಬಿತ್ತನೆಗೆ ಚಿತ್ತಿ ಮಳೆ ನಕ್ಷತ್ರ ಸಕಾಲವಾಗಿದೆ. ಆದರೆ ಮಳೆ ಇದಕ್ಕೆ ಅಡಚಣೆ ಉಂಟು ಮಾಡುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.