ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಮಳೆ ಶನಿವಾರವೂ ಮುಂದುವರಿದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಭೋಸಗಾ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಲಕ್ಷ್ಮಿಬಾಯಿ ಬಿರಾದಾರ (55) ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಫಜಲಪುರ ತಹಶೀಲ್ದಾರ್ ಸಂಜುಕುಮಾರ ದಾಸರ ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕಿನಲ್ಲಿ 50 ಮನೆಗಳು ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ಹಾಗೂ ಹುಲಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ನಾಲ್ಕು, ಕಮಲನಗರ ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದೆ.
ಮಹಾರಾಷ್ಟ್ರದಿಂದ ಮುನ್ಸೂಚನೆ ಇಲ್ಲದೆ ನೀರು ಹರಿಸಿರುವ ಕಾರಣ ಮಾಂಜ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ಹುಲಸೂರ ತಾಲ್ಲೂಕಿನ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಬಸನಾಳ–ಕೋರಿಯಾಳ ಮಧ್ಯದ ಸೇತುವೆ ಮೂಲಕ ಸಂಪರ್ಕ ಕಡಿತಗೊಂಡಿತ್ತು.
ಕೊಡಗಿನ ಹಲವೆಡೆ ಭಾರಿ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಶನಿವಾರವೂ ಭಾರಿ ಮಳೆ ಮುಂದುವರಿದಿದೆ. ಮಡಿಕೇರಿ ನಗರ ಸೇರಿ ತಾಲ್ಲೂಕಿನಾದ್ಯಂತ ಬಿರುಸಿನ ಮಳೆಯಾಗಿದೆ.
ಸಂಪಾಜೆಯಲ್ಲಿ 11 ಸೆಂ.ಮೀ, ಶಾಂತಳ್ಳಿಯಲ್ಲಿ 10, ಮಡಿಕೇರಿ 7, ವಿರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆಯಲ್ಲಿ ತಲಾ 4 ಸೆಂ.ಮೀನಷ್ಟು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.