ADVERTISEMENT

ಕಲಬುರಗಿ: ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆ

ಚಿಂಚೋಳಿ ತಾಲ್ಲೂಕಿನಲ್ಲಿ 60 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:10 IST
Last Updated 21 ಮೇ 2022, 4:10 IST
ಚಿಂಚೋಳಿ ತಾಲ್ಲೂಕು ಅಣವಾರ ಗ್ರಾಮದಲ್ಲಿ ಶುಕ್ರವಾರ ಬಿರುಗಾಳಿ– ಮಳೆಯಿಂದ ಬಾಳೆ ಬೆಳೆ ನೆಲಕ್ಕುರುಳಿದೆ
ಚಿಂಚೋಳಿ ತಾಲ್ಲೂಕು ಅಣವಾರ ಗ್ರಾಮದಲ್ಲಿ ಶುಕ್ರವಾರ ಬಿರುಗಾಳಿ– ಮಳೆಯಿಂದ ಬಾಳೆ ಬೆಳೆ ನೆಲಕ್ಕುರುಳಿದೆ   

ಕಲಬುರಗಿ: ನಗರವೂ ಸೇರಿದಂತೆ ಚಿಂಚೋಳಿ, ಚಿತ್ತಾಪುರ ತಾಲ್ಲೂಕಿನ ಅಲ್ಲಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದೆ. ಉಳಿದಂತೆ, ಜಿಲ್ಲೆಯಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವೇ ಇದ್ದು, ಉರಿ ಬೇಸಿಗೆಯ ದಿನಗಳಲ್ಲೂ ಜನ ತಂಪಾದ ವಾತಾವರಣ ಅನುಭವಿಸಿದರು.

ನಗರದಲ್ಲಿ ನಸುಕಿನ 3ಕ್ಕೆ ಆರಂಭವಾದ ತುಂತುರು ಮಳೆ ಬೆಳಿಗ್ಗೆ 6ರವರೆಗೂ ಸುರಿಯಿತು. ನಂತರ ದಟ್ಟ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2ರ ಸುಮಾರಿಗೆ ಧಾರಾಕಾರ ಮಳೆ ಒಂದು ತಾಸು ಸುರಿಯಿತು.

ಇಲ್ಲಿನ ಲಾಳಗೇರಿ ಕ್ರಾಸ್‌, ಮುಸ್ಲಿಂ ಚೌಕ, ಬಸ್‌ ನಿಲ್ದಾಣ, ಚಪ್ಪಲ್‌ ಬಜಾರ್‌, ದರ್ಗಾ ರೋಡ್‌,ಜಯನಗರ, ಸುಂದರ ನಗರ, ಪ್ರಶಾಂತ ನಗರ, ವೀರೇಂದ್ರ ಪಾಟೀಲ ಬಡಾವಣೆಯ ಕರಿದಾದ ರಸ್ತೆಗಳಲ್ಲಿ ನೀರು ಕಟ್ಟಿಕೊಂಡಿತು.ಐವಾನ್‌ ಇ ಶಾಹಿ ಮಾರ್ಗ, ಶಹಾಬಜಾರ್ ರಸ್ತೆಗಳಲ್ಲಿ ಚರಂಡಿಗಳು ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿಯಿತು. ಸೂಪರ್‌ ಮಾರ್ಕೆಟ್‌ ಪ್ರದೇಶ, ಸೋನಿಯಾ ಗಾಂಧಿ ಬಡಾವಣೆ,ಗುಲ್ಲಾಬವಾಡಿ, ಗುಲಬರ್ಗಾ ವಿಶ್ವವಿದ್ಯಾಲಯ‍, ಶಕ್ತಿ ನಗರ, ಗಾಜಿಯಾಬಾದ್‌, ದರ್ಗಾ ಬಡಾವಣೆ, ಶಾಸ್ತ್ರಿ ನಗರ, ಮಹಾವೀರ ನಗರ ಸೇರಿದಂತೆ ನಗರದ ಬಹುಪಾಲು ಪ್ರದೇಶಗಳಲ್ಲಿ ಮಳೆ ಸುರಿಯಿತು.

ADVERTISEMENT

ಬೆಳೆಗಳಿಗೆ ಹಾನಿ
ಚಿಂಚೋಳಿ:
ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಂದಾಜು 60 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ‌ ರಾಜಕುಮಾರ ಗೋವಿಂದ ತಿಳಿಸಿದ್ದಾರೆ.

ಅಣವಾರ, ದೇಗಲಮಡಿ, ಐನೊಳ್ಳಿ, ನಾಗಾಈದಲಾಯಿ, ಚಿಂಚೋಳಿ, ಐನಾಪುರ, ಚಿಮ್ಮನಚೋಡ, ಚಿಮ್ಮಾಈದಲಾಯಿ, ದಸ್ತಾಪುರ, ಮೊದಲಾದ ಕಡೆ ನಿರಂತರ ಮಳೆ ಸುರಿಯುತ್ತಿರುವುದರಿಂದ ಬಾಳೆ, ಕಲ್ಲಂಗಡಿ, ಈರುಳ್ಳಿ, ಮೆಣಸಿನ ಕಾಯಿ, ಅರಶಿಣ, ಮಾವು ಮೊದಲಾದ ಬೆಳೆಗಳಿಗೆ ಹಾನಿಯಾಗಿದೆ. ಅಣವಾರ, ದೇಗಲಮಡಿ ಗ್ರಾಮದಲ್ಲಿ ಹೆಚ್ಚಿನ ಹಾನಿಯಾಗಿದೆ, ಬಿರುಗಾಳಿಗೆ ಅಣವಾರದಲ್ಲಿ ಸಾಲು ಸಾಲು ಬಾಳೆಗಿಡಗಳು ನೆಲಕ್ಕುರುಳಿವೆ ಇದರಿಂದ ತೀವ್ರ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಗುಡುಗು– ಮಿಂಚಿನ ಆರ್ಭಟ
ಚಿತ್ತಾಪುರ:
ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೆ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗುಡುಗು ಮಿಂಚಿನ ಆರ್ಭಟದೊಂದಿಗೆ ಚಿತ್ತಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಳೆ ಸುರಿದಿದೆ.

ಬೇಸಿಗೆ ಬಿಸಿಲಿನ ತಾಪಕ್ಕೆ ಕಡಿವಾಣ ಬಿದ್ದಿದ್ದು, ತಂಪು ವಾತಾವರಣ ಸೃಷ್ಟಿಯಾಗಿದೆ. ಮಲಕೂಡ, ದಂಡೋತಿ, ಇವಣಿ, ಬೆಳಗುಂಪಾ, ಭಾಗೋಡಿ, ಮುಡಬೂಳ, ಮರಗೋಳ, ಮೊಗಲಾ, ಇಟಗಾ, ಕದ್ದರಗಿ, ಯರಗಲ್ ಸೇರಿದಂತೆ ವಿವಿಧೆಡೆ ಮಳೆ ಬಂದಿದೆ.

ಈ ಬಾರಿಯೂ ಉತ್ತಮ ಮಳೆ ನಿರೀಕ್ಷೆ
ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರೀಕ್ಷೆಗಿಂತ ಮುಂಚಿತವಾ‌ಗಿಯೇ ಮುಂಗಾರು ಪ್ರವೇಶ ಮಾಡಲಿದ್ದು, ಪ್ರಸಕ್ತ ವರ್ಷ ಕೂಡ ‘ಉತ್ತಮ ಮಳೆ ನಿರೀಕ್ಷೆ’ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗಿದ್ದು, ಅದರ ಉಳಿಕೆಯ ಮೋಡಗಳು ಇತ್ತ ಚದುರುತ್ತಿವೆ. ಅದರ ಪರಿಣಾಮ ಅಲ್ಲಲ್ಲಿ ಮಳೆ ಬೀಳುತ್ತಿದೆ. ಮೇ 27ರಿಂದ ಪೂರ್ವ ಮುಂಗಾರು ಆರಂಭವಾಗಲಿದೆ. ಜೂನ್‌ 7ಕ್ಕೆ ಮೃಗಶಿರ ಮಳೆ ಶುರುವಾಗಲಿದ್ದು, ಅಲ್ಲಿಂದ ಮುಂಗಾರು ಹದವಾಗಿ ಬೀಳಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಶನಿವಾರ ಹಾಗೂ ಭಾನುವಾರ ಅಲ್ಲಲ್ಲಿ ಮಳೆ ಬೀಳಲಿದ್ದು, ನಂತರ ಮೋಡಗಳು ಚೆದರುತ್ತವೆ. ಮತ್ತೆ ಬಿಸಿಲಿನ ವಾತಾವರಣ ಉಂಟಾಗಲಿದೆ‌. ಆದರೂ ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಂಡ ರೈತರು ಆತಂಕ ಪಡಬೇಕಾಗಿಲ್ಲ. ಈ ಬಾರಿಯೂ ಹದವಾದ ಮಳೆ ನಿರೀಕ್ಷಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.