ADVERTISEMENT

ಚಿಂಚೋಳಿ: ದೇವಾಲಯ, ಬೆಳೆಗಳು ಜಲಾವೃತ, 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:19 IST
Last Updated 1 ಸೆಪ್ಟೆಂಬರ್ 2024, 16:19 IST
ಚಿಂಚೋಳಿ ತಾಲ್ಲೂಕು ತಾಜಲಾಪುರ ಸೇತುವೆ ಮುಳುಗಿದ್ದರಿಂದ ಸಂಪರ್ಕ ಕಡಿತವಾಗಿರುವುದು
ಚಿಂಚೋಳಿ ತಾಲ್ಲೂಕು ತಾಜಲಾಪುರ ಸೇತುವೆ ಮುಳುಗಿದ್ದರಿಂದ ಸಂಪರ್ಕ ಕಡಿತವಾಗಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಗೆ ಹಲವು ಸೇತುವೆಗಳು ಮುಳುಗಡೆಯಾದರೆ ದೇವಾಲಯ, ಸಾವಿರಾರು ಹೆಕ್ಟೇರ್ ಬೆಳೆ ಜಲಾವೃತವಾಗಿವೆ.

ತಾಲ್ಲೂಕಿನ ಸೇಡಂ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬೆನಕನಳ್ಳಿ, ಕೆರೊಳ್ಳಿ, ಕೊರಡಂಪಳ್ಳಿ ಹಾಗೂ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಕಲ್ಲೂರು ರೋಡ್ ಗ್ರಾಮ ಸೇರಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ನಿರಂತರ ಸುರಿದ ಮಳೆಯಿಂದ 12 ಮನೆಗಳ ಗೋಡೆ ಭಾಗಶ: ಉರುಳಿವೆ. ಸುಲೇಪೇಟ, ಐನಾಪುರ, ಚಿಂಚೋಳಿ ಹೋಬಳಿಗಳಲ್ಲಿ ತಲಾ 4ರಂತೆ 12 ಮನೆಗಳು ಮಳೆಯಿಂದ ಹಾನಿಗೊಳಲಾಗಿವೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಲ್ಲೂರು ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬಂದು ಹನುಮಾನ ಮಂದಿರ ಜಲಾವೃತವಾಗಿತ್ತು. ಭೋವಿ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿದರೆ ರಕ್ಷಣ ಗೋಡೆ ಕುಸಿದಿದೆ ಎಂದು ತಾ.ಪಂ. ಮಾಜಿ ಸದಸ್ಯ ಜಗನ್ನಾಥ ಈದಲಾಯಿ ತಿಳಿಸಿದರು.

ಹೆದ್ದಾರಿ ಮೇಲಿನಿಂದ ಹರಿದ ನೀರು: ಬಾಪೂರ ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಕರ್ನಾಟಕದ ಮಿರಿಯಾಣ ಮತ್ತು ತೆಲಂಗಾಣದ ಕೊತಲಾಪುರ ಮಧ್ಯೆ ಹರಿಯುವ ಹಳ್ಳ ತುಂಬಿ ಹರಿದಿದ್ದರಿಂದ ಸಂಚಾರ ಬಂದ್ ಆಗಿತ್ತು.

ಮಿರಿಯಾಣ ಸೀಮೆಯಲ್ಲಿನ ಕಿರು ಸೇತುವೆ ಮುಳುಗಿದ್ದರಿಂದ ಸಂಚಾರ ಸ್ಥಗಿತವಾಗಿತ್ತು. ಇದರ ಜತೆಗೆ ರಾಜ್ಯ ಹೆದ್ದಾರಿ 149ರಲ್ಲಿ ಬರುವ ತಾಲ್ಲೂಕಿನ ಭೂತಪೂರ ಚಿಂತಪಳ್ಳಿ ಮಧ್ಯೆ ಸೇತುವೆ ಪ್ರವಾಹದ ನೀರಿನಲ್ಲಿ ಮುಳುಗಿ ಸಂಚಾರ ಸಂಪರ್ಕ ಕಡಿತವಾಗಿದೆ.
ತಾಲ್ಲೂಕಿನ ನಾಗಾಈದಲಾಯಿ ಹಳೆ ಊರುಮತ್ತು ಹೊಸ ಊರಿನ ಮಧ್ಯೆ ಹಾಗೂ ಪಟಪಳ್ಳಿ ಹಳೆಊರು ಹೊಸ ಊರಿನ ಮಧ್ಯೆ ತೊರೆ ತುಂಬಿ ಹರಿದಿದ್ದರಿಂದ ಎರಡು ಗ್ರಾಮಗಳಲ್ಲಿ ಸಂಪರ್ಕ ಕಡಿತವಾಗಿದೆ.

ಜಲಾಶಯದ ನೀರು ನದಿಗೆ ಬಿಡುಗಡೆ: ನಾಗರಾಳ ಜಲಾಶಯದಿಂದ 4 ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಲಾಶಯಕ್ಕೆ 3,500 ಕ್ಯುಸೆಕ್ ಒಳಹರಿವಿದೆ. ಚಿಮ್ಮನಚೋಡ, ಗಾರಂಪಳ್ಳಿ, ತಾಜಲಾಪುರ ಸೇತುವೆಗಳು, ಚಂದಾಪುರ, ಅಣವಾರ, ಭಕ್ತಂಪಳ್ಳಿ ಬಾಂದಾರು ಸೇತುವೆ ಮುಳುಗಡೆಯಾಗಿವೆ. ಇದರಿಂದ ಗ್ರಾಮಗಳು ಸಂಪರ್ಕ ಕಡಿತವಾಗಿವೆ.

ಚಂದ್ರಂಪಳ್ಳಿ ಜಲಾಶಯದಿಂದ 3,600 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ಮತ್ತು ಕಾಗಿಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಚಿಮ್ಮನಚೋಡದಲ್ಲಿ ಸಂಗಮೇಶ್ವರ ದೇವಾಲಯ ಜಲಾವೃತವಾಗಿದೆ ಎಂದು ನಿವೃತ್ತ ಪಿಡಿಒ ಸಂಗಾರಡ್ಡಿ ನರಸನ್ ತಿಳಿಸಿದರು.

ಬೆಳೆಗಳು ಜಲಾವೃತ: ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಚಿಮ್ಮನಚೋಡದಿಂದ ಜಟ್ಟೂರುವರೆಗೆ ಮುಲ್ಲಾಮಾರಿ ನದಿಯ ಎರಡು ಬದಿಗೆ ಮತ್ತು ತಗ್ಗು ಪ್ರದೇಶದ ಹೊಲಗಳಲ್ಲಿನ ಬೆಳೆಗಳು ಜಲಾವೃತವಾಗಿದೆ. ಕೊಯ್ಲಿಗೆ ಬಂದ ಹೆಸರು, ಉದ್ದು ಮತ್ತು ಬೆಳವಣಿಗೆ ಹಂತದಲ್ಲಿರುವ ತೊಗರಿ ಬೆಳೆ ಮಳೆಯಿಂದ ಹಾನಿಗೊಳಲಾಗಿದೆ ಎಂದು ತಾಜಲಾಪುರದ ಬಸವರಡ್ಡಿ ಡೋಣಿ ಮತ್ತು ಅಣವಾರ ಸಂಗಯ್ಯಸ್ವಾಮಿ ತಿಳಿಸಿದರು. ಸಾವಿರಾರು ಹೆಕ್ಟೇರ್ ಬೆಳೆ ಮಳೆಯಿಂದ ಹಾಳಾಗಿದೆ.

ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.