ಚಿಂಚೋಳಿ (ಕಲಬುರಗಿ ಜಿಲ್ಲೆ): ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನ ಚಂದ್ರಂಪಳ್ಳಿ ಯೋಜನೆಯ ಜಲಾಶಯ ಶೇ 80 ಭರ್ತಿಯಾಗಿದೆ.
ಶನಿವಾರ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಜಲಾಶಯಕ್ಕೆ ಒಂದೇ ದಿನದಲ್ಲಿ 1.5 ಮೀಟರ್ ನೀರು ಹರಿದು ಬಂದಿದೆ. ಜಲಾಶಯದ ಒಳ ಹರಿವು 1468 ಕ್ಯುಸೆಕ್ ದಾಖಲಾಗಿದ್ದು ಭಾನುವಾರ ಬೆಳಗಿನ ನೀರಿನ ಮಟ್ಟ 490.03 ಮೀಟರ್ ಇದೆ. ಜಲಾಶಯದ ನೀರು ಸಂಗ್ರಹಣೆಯ ಗರೀಷ್ಠ ಮಟ್ಟ 493.29 ಮೀಟರ್ ಇದೆ. ಜಲಾಶಯ ಭರ್ತಿಗೆ ಇನ್ನೂ ಎರಡು ಮೀಟರ್ ಮಾತ್ರ ಬಾಕಿ ಇದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ ಕಳಸ್ಕರ ತಿಳಿಸಿದರು.
ಸಧ್ಯ ಒಳಹರಿವು ಕ್ಷೀಣಿಸುತ್ತಿದೆ. ಜಲಾಶಯದ ಮೇಲ್ಭಾಗದ ಕುಂಚಾವರಂ ಕಾಡು ಮತ್ತು ತೆಲಂಗಾಣದ ಜಹೀರಾಬಾದ್ ಸುತ್ತಲೂ ಮಳೆಯಾದರೆ ಒಳ ಹರಿವು ಹೆಚ್ಚಲಿದೆ. ಈಗ ಒಳ ಹರಿವು ತಗ್ಗುತ್ತಿದೆ. ಭಾನುವಾರ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ 492 ಮೀಟರ್ ತಲುಪುವ ಸಾಧ್ಯತೆ ಇದ್ದರೆ, ಮೇಲಧಿಕಾರಿಗಳ ಅನುಮತಿ ಪಡೆದು ಪ್ರವಾಹ ನಿರ್ವಹಣೆಯ ಪ್ರಯುಕ್ತ ಜಲಾಶಯದಿಂದ ನೀರು ಹೊರ ಬಿಡಲಾಗುವುದು ಎಂದರು.
ಪ್ರಯುಕ್ತ ಸಾರ್ವಜನಿಕರು ನದಿ ದಾಟುವುದು, ಜಾನುವಾರುಗಳನ್ನು ನದಿಗೆ ಕರೆದೊಯ್ದು ಮೈ ತೊಳೆಯುವುದು ಮತ್ತು ಮಹಿಳೆಯರು ಬಟ್ಟೆ ತೊಳೆಯಲುನದಿಗೆ ತೆರಳಬಾರದು ಎಂದು ನದಿ ಪಾತ್ರದ ಗ್ರಾಮಗಳ ಜನರಲ್ಲಿ ಚೇತನ ಕಳಸ್ಕರ ಮನವಿ ಮಾಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಸುಲೇಪೇಟ 63, ಚಿಮ್ಮನಚೋಡ 60, ಚಿಂಚೋಳಿ 58, ಕುಂಚಾವರಂ 50, ನಿಡಗುಂದಾ 45, ಐನಾಪುರ 33, ಕೋಡ್ಲಿ 30 ಮಿ.ಮೀ ಮಳೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.