ಶಿವರಾಜ ತಂಗಡಗಿ
ಕಲಬುರಗಿ: ‘ಲೋಕಾಯುಕ್ತ ಪೊಲೀಸರು ಕಲಬುರಗಿ ಜಿಲ್ಲೆಯ ಏಳು ಹಾಸ್ಟೆಲ್‌ಗಳಿಗೆ ಹಾಗೂ ಯಾದಗಿರಿ ಜಿಲ್ಲೆಯ ಸುರಪುರದ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಈತನಕ ವರದಿ ಸಲ್ಲಿಸಿಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಅವ್ಯವಸ್ಥೆ ಬಗೆಗೆ ಪರಿಶೀಲನೆ ನಡೆಸಿದ್ದ ಕುರಿತು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ನವೆಂಬರ್ 11ರಂದು ಕಲಬುರಗಿ ಜಿಲ್ಲೆಯ ಹಾಸ್ಟೆಲ್‌ಗಳು, ನವೆಂಬರ್ 15ರಂದು ಯಾದಗಿರಿ ಜಿಲ್ಲೆಯ ಸುರಪುರ ಹಾಸ್ಟೆಲ್‌ಗೆ ಭೇಟಿ ಕೊಟ್ಟಿದ್ದರು. ಆದರೆ, ವರದಿ ಕೊಟ್ಟಿಲ್ಲ’ ಎಂದಿದ್ದಾರೆ.
‘ಕಲಬುರಗಿ ಜಿಲ್ಲೆಯಲ್ಲಿ ಇಲಾಖೆಯಡಿ ಮೆಟ್ರಿಕ್ ಪೂರ್ವ 73 ಹಾಗೂ ಮೆಟ್ರಿಕ್ ನಂತರದ 63 ಸೇರಿದಂತೆ ಒಟ್ಟು 136 ಹಾಸ್ಟೆಲ್‌ಗಳಿವೆ. ಅದರಂತೆ ಯಾದಗಿರಿಯಲ್ಲಿ ಮೆಟ್ರಿಕ್ ಪೂರ್ವ 44 ಹಾಗೂ ಮೆಟ್ರಿಕ್ ನಂತರದ 23 ಸೇರಿದಂತೆ ಒಟ್ಟು 67 ಹಾಸ್ಟೆಲ್‌ಗಳಿವೆ’ ಎಂದಿದ್ದಾರೆ.
‘ಇದಲ್ಲದೇ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಲಬುರಗಿಯಲ್ಲಿ 44 ವಸತಿ ಶಾಲೆ/ಕಾಲೇಜುಗಳಿದ್ದು, ಅದರಲ್ಲಿ ಏಳು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿವೆ. ಯಾದಗಿರಿಯಲ್ಲಿ 21 ವಸತಿ ಶಾಲೆ/ಕಾಲೇಜುಗಳಿದ್ದು, ಅದರಲ್ಲಿ ಎರಡು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿವೆ’ ಎಂದಿದ್ದಾರೆ.