ADVERTISEMENT

ಬಿಸಿಎಂ ಇಲಾಖೆ ಯೋಜನೆ; ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠ

ಪಿಯು ಕಾಲೇಜು ಉಪನ್ಯಾಸಕರಿಗೆ ಹೊಣೆ

ಮನೋಜ ಕುಮಾರ್ ಗುದ್ದಿ
Published 15 ಜೂನ್ 2022, 6:32 IST
Last Updated 15 ಜೂನ್ 2022, 6:32 IST
ಕಲಬುರಗಿಯ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನಡೆದಿರುವುದು
ಕಲಬುರಗಿಯ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನಡೆದಿರುವುದು   

ಕಲಬುರಗಿ: ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡಲು ಕಾಡುವ ಕೀಳರಿಮೆ ಹೋಗಲಾಡಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (ಬಿಸಿಎಂ) ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ‘ಸ್ಪೋಕನ್ ಇಂಗ್ಲಿಷ್’ ಬಗ್ಗೆ ಪಾಠ ಕೊಡಿಸಲು ಆರಂಭಿಸಿದೆ.

ಸರ್ಕಾರಿ ಪದವಿ‍ಪೂರ್ವ ಕಾಲೇಜುಗಳ ಇಂಗ್ಲಿಷ್ ಉಪನ್ಯಾಸಕರಿಗೆ ಪಾಠ ಹೇಳುವ ಜವಾಬ್ದಾರಿ ವಹಿಸಲಾಗಿದ್ದು, ತಾವು ಕೆಲಸ ಮಾಡುವ ಕಾಲೇಜಿನ ಸಮೀಪದ ಹಾಸ್ಟೆಲ್‌ಗಳಿಗೆ ತಿಂಗಳಲ್ಲಿ 15 ದಿನ ಸಂಜೆ 5 ರಿಂದ 6ರವರೆಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು.

‘ಒಟ್ಟು 40 ಉಪನ್ಯಾಸಕರನ್ನು ಜಿಲ್ಲೆಯ ವಿವಿಧ ಬಿಸಿಎಂ ಹಾಸ್ಟೆಲ್‌ಗೆ ನಿಯೋಜಿಸಲಾಗಿದೆ. ಜೂನ್ 1ರಿಂದಲೇ ಸಂಜೆ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಮೌಲ್ಯಮಾಪನ ಕೆಲಸವಿದ್ದ ಕಾರಣ ದಿನಾಂಕ ಮುಂದೂಡಲಾಗಿತ್ತು. ಈಗ ಬಹುತೇಕ ಉಪನ್ಯಾಸಕರು ಹಾಸ್ಟೆಲ್‌ಗಳಲ್ಲಿ ಪಾಠ ಮಾಡುತ್ತಿದ್ದಾರೆ’ ಎಂದು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಸಂಗಾ ‘‍ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇಂಗ್ಲಿಷ್ ಹಿಂಜರಿಕೆ: ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆದು ನಗರ, ಪಟ್ಟಣಗಳಲ್ಲಿ ಅಧ್ಯಯನಕ್ಕೆ ಬರುವ ಬಹುತೇಕ ವಿದ್ಯಾ
ರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರು. ಅವರಿಗೆ ಇಂಗ್ಲಿಷ್ ಸುಲಭವಾಗಿ ಮಾತನಾಡಲು ಬಾರದ ಕಾರಣ ಬಿಸಿಎಂ ಇಲಾಖೆಯು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವನ್ನು ಹೆಚ್ಚಿಸಲು ಈ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಮೇ 4ರಂದು ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಜೊತೆಗೆ ಬಿಸಿಎಂ ಇಲಾಖೆಯ ಅಧಿಕಾರಿಗಳು ಚರ್ಚಿಸಿದ್ದಾರೆ.

ಹೆಚ್ಚುವರಿ ಕಾರ್ಯಭಾರಕ್ಕೆ ಅಸಮಾಧಾನ

‘ಬೆಳಿಗ್ಗೆಯಿಂದ ಸಂಜೆ 4ರವರೆಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸ ಹಾಗೂ ಕಾಲೇಜಿನ ಇತರೆ ಕೆಲಸ ನಿರ್ವಹಿಸುವುದರ ಜೊತೆಗೆ ಹೆಚ್ಚುವರಿಯಾಗಿ ಹಾಸ್ಟೆಲ್‌ಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಬೇಕು ಎಂಬ ಸರ್ಕಾರದ ತೀರ್ಮಾನದ ಬಗ್ಗೆ ಹಲವು ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆಯಿಂದ ಸಂಜೆಯವರೆಗೆ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿರುತ್ತೇವೆ. ಮತ್ತೆ ಸಂಜೆ 5ಕ್ಕೆ ಹಾಸ್ಟೆಲ್‌ಗಳಿಗೆ ಹೋಗುವಷ್ಟರಲ್ಲಿ ಪಾಠ ಹೇಳುವ ಚೈತನ್ಯವೇ ಇರುವುದಿಲ್ಲ. ಇದು ಸರ್ಕಾರದ ಅವೈಜ್ಞಾನಿಕ ತೀರ್ಮಾನ’ ಎಂದು ಕೆಲ ಉಪನ್ಯಾಸಕರು ‘ಪ್ರಜಾವಾಣಿ’ಗೆ ಕರೆ ಮಾಡಿ ಬೇಸರ ಹೊರಹಾಕಿದರು. ‘ನಮ್ಮ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಪಾಠ ಹೇಳುವುದರ ಜೊತೆಗೆ ‍ಪ್ರವೇಶ‍‍ಪತ್ರಗಳನ್ನು ಪಡೆದುಕೊಂಡು ದಾಖಲು ಮಾಡಿಕೊಳ್ಳಬೇಕು. ಒಬ್ಬ ಉಪನ್ಯಾಸಕ ಅಥವಾ ಉಪನ್ಯಾಸಕಿ ಅಷ್ಟು ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಹೇಗೆ? ಅವರ ಸಿಲೇಬಸ್ ಮುಗಿಸುವುದು, ಹೋಮ್ ವರ್ಕ್ ಪರಿಶೀಲಿಸುವುದು ಹೇಗೆ’ಎಂದುಉಪನ್ಯಾಸಕಿಯೊಬ್ಬರುತಿಳಿಸಿದರು.

‘ಕಾರ್ಯ ಒತ್ತಡ ಕಾರಣಕ್ಕೆ ಇನ್ನೊಬ್ಬ ಸಿಬ್ಬಂದಿ ನಿಯೋಜಿಸಲು ಕೋರಿದರೂ ಸ್ಪಂದನೆ ಸಿಕ್ಕಿಲ್ಲ. ನಮಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಷ್ಟ. ಆದರೆ, ಇಷ್ಟೆಲ್ಲ ಕಾರ್ಯಭಾರದ ಮಧ್ಯೆ ಆಸಕ್ತಿ ಬರುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

* ಬಿಸಿಎಂ ಇಲಾಖೆಯ ಅಧೀನದಲ್ಲಿರುವ ಹಾಸ್ಟೆಲ್‌ಗಳಲ್ಲಿ ತಿಂಗಳಲ್ಲಿ 15 ದಿನ ಪಾಠ ಮಾಡಲು ಸರ್ಕಾರಿ ಕಾಲೇಜು ಉಪನ್ಯಾಸಕರಿಗೆ ಸರ್ಕಾರ ಸೂಚಿಸಿದೆ. ಅವರಿಗೆ ಪ್ರತಿ ತರಗತಿಗೆ ₹ 200 ನೀಡಲಾಗುವುದು
-ರಮೇಶ ಸಂಗಾ, ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

* ಸರ್ಕಾರದ ಆದೇಶ ಇರುವುದರಿಂದ ಉಪನ್ಯಾಸಕರಿಗೆ ಸ್ಪೋಕನ್ ಇಂಗ್ಲಿಷ್ ಪಾಠ ಮಾಡುವಂತೆ ಸೂಚಿಸಿದ್ದೇನೆ. ಕೆಲವರು ಅನಾರೋಗ್ಯದ ಕಾರಣ ನೀಡಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲಾಗುವುದು

ಶಿವಶರಣಪ್ಪ ಮೂಳೆಗಾಂವ, ಡಿಡಿಪಿಯು, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.