ADVERTISEMENT

‘ಕನಿಷ್ಠ ವೇತನವನ್ನೂ ಕೊಡದ ಸರ್ಕಾರ’

ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 15:41 IST
Last Updated 28 ನವೆಂಬರ್ 2022, 15:41 IST
ಕಲಬುರಗಿ ಜಿಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಮಹೇಶ ನಾಡಗೌಡ ಮಾತನಾಡಿದರು. ಶರಣು ಹೇರೂರ, ಎಚ್.ಜಿ.ದೇಸಾಯಿ, ರಾಘವೇಂದ್ರ ಎಂ.ಜಿ, ಎಸ್‌.ಎಂ. ಶರ್ಮಾ ಇದ್ದರು
ಕಲಬುರಗಿ ಜಿಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಮಹೇಶ ನಾಡಗೌಡ ಮಾತನಾಡಿದರು. ಶರಣು ಹೇರೂರ, ಎಚ್.ಜಿ.ದೇಸಾಯಿ, ರಾಘವೇಂದ್ರ ಎಂ.ಜಿ, ಎಸ್‌.ಎಂ. ಶರ್ಮಾ ಇದ್ದರು   

ಕಲಬುರಗಿ: ‘ಕಾರ್ಮಿಕರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಕಾರ್ಮಿಕ ಕಾಯ್ದೆ ಪ್ರಕಾರ ಕೊಡಬೇಕಾದ ಎಷ್ಟೋ ಸವಲತ್ತುಗಳನ್ನು ಸ್ವತಃ ಸರ್ಕಾರ ಕೊಡುತ್ತಿಲ್ಲ. ಗುತ್ತಿಗೆ ಕಾರ್ಮಿಕರು ಜೀತದ ಹಾಗೆ 10ರಿಂದ 12 ತಾಸು ಸರಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ರಜೆ ಸೌಲಭ್ಯಗಳಿಲ್ಲ, ಕನಿಷ್ಠ ವೇತನವನ್ನೂ ಕೊಡುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಮಹೇಶ ನಾಡಗೌಡ ಟೀಕಿಸಿದರು.

ನಗರದಲ್ಲಿ ಸೋಮವಾರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿ ತಿಂಗಳೂ ಸರಿಯಾಗಿ ವೇತನವಾಗುವುದಿಲ್ಲ. ಈ ಸಮಸ್ಯೆಗಳ ಮಧ್ಯೆ ಅವರು ವಿದ್ಯಾರ್ಥಿಗಳಿಗೆ ಮೂರು ಹೊತ್ತು ಅಡುಗೆ ಮಾಡಿ ಊಟ ಬಡಿಸಬೇಕು. ಸರ್ಕಾರವೇ ಹೊರಗುತ್ತಿಗೆ ಕಾರ್ಮಿಕರಿಗೆ ಮೋಸ ಮಾಡುತ್ತಿದೆ’ ಎಂದರು.

ಆಲ್‌ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ.ದೇಸಾಯಿ ಮಾತನಾಡಿ, ‘ಇಡೀ ವ್ಯವಸ್ಥೆ ಇಂದು ಹಾಳಾಗಿದೆ. ದೇಶದಲ್ಲಿ ಎಲ್ಲಾ ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ, ಬೆಲೆಗಳು ಗಗನಕ್ಕೆ ಮುಟ್ಟುತ್ತಿವೆ, ಕಾರ್ಮಿಕರ ಬದುಕು ಬಹಳ ದುಸ್ತರವಾಗಿದೆ. ಇಡೀ ದೇಶದ ಸಂಪತ್ತು ಕೆಲವೇ ಕೆಲವರು ಲೂಟಿ ಮಾಡುತ್ತಿದ್ದಾರೆ. ಸರ್ಕಾರಗಳು ಅವರ ಹಿತವನ್ನು ಕಾಪಾಡುತ್ತಿತ್ತಿವೆ. ಹಾಗಾಗಿ ಕೆಲವೇ ಶ್ರೀಮಂತರು ಅಗಾಧ ಸಂಪತ್ತಿನ ಮಾಲೀಕರಾಗಿದ್ದಾರೆ. ಇದರಿಂದಾಗಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಹೋರಾಟ ಒಂದೇ ಮಾರ್ಗ. ಇಡೀ ಕಾರ್ಮಿಕವರ್ಗದ ಸಂಘಟಿತ ಹೋರಾಟವು ಜನರ ಜೀವನದಲ್ಲಿ ಸಂತೋಷವನ್ನು ತರಲು ಸಾಧ್ಯ’ ಎಂದರು.

ADVERTISEMENT

ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಸಂಚಾಲಕ ರಾಘವೇಂದ್ರ ಎಂ.ಜಿ. ವಹಿಸಿದ್ದರು. ಶರಣು ಹೇರೂರು ನಿರೂಪಿಸಿದರು. ವಿವಿಧ ತಾಲ್ಲೂಕುಗಳಿಂದ ಹಾಸ್ಟೆಲ್ ಕಾರ್ಮಿಕರು ಆಗಮಿಸಿದ್ದರು.

ನಂತರ ಸಮ್ಮೇಳನದಲ್ಲಿ ಹೊಸ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಘವೇಂದ್ರ ಎಂ.ಜಿ. ಉಪಾಧ್ಯಕ್ಷರಾಗಿ ಸಂತೋಷ ದೊಡಮನಿ, ಬಸವರಾಜ ಎಚ್. ಹುಳಗೋಳ, ಕಾರ್ಯದರ್ಶಿಯಾಗಿ ಶರಣು ಹೇರೂರು, ಜಂಟಿ ಕಾರ್ಯದರ್ಶಿಗಳಾಗಿ ಶರಣಮ್ಮ ಕಟ್ಟಿಮನಿ, ಮಲ್ಲಮ್ಮ ಸೇಡಂ, ರಮೇಶ ಮುಧೋಳ, ವಿಜಯಲಕ್ಷ್ಮಿ ಕಾಶಿ ಚಿತ್ತಾಪೂರ, ಚಿತ್ರಸೇನ್ ಸೇಡಂ, ಸದಸ್ಯರಾಗಿ ಪವನ ಕೋಡ್ಲಾ ಸೇಡಂ, ಕಿರಣ ಐಜಿಆರ್‌ಎಸ್ ಕರದಳ್ಳಿ, ಸದಾನಂದ ಶಹಾಬಾದ, ಇಸಮ್ಮ ನಾಲವಾರ, ಇರಗಪ್ಪ ಶಹಾಬಾದ, ಮಲ್ಲಿಕಾರ್ಜುನ ಜೇವರ್ಗಿ, ಬೋರಮ್ಮ ಜೇವರ್ಗಿ, ಗೀತಾ ಸೇಡಂ, ಅನಸೂಬಾಯಿ ಕಲಬುರಗಿ, ರಮಾ ಕಲಬುರಗಿ, ಮಲಕಮ್ಮ ಜೇವರ್ಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.