ಕಲಬುರಗಿ: ‘ನಗರದಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಪಾಲಿಕೆಯಿಂದ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಲು ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದರೆ ಜುಲೈ 22ರಂದು ಪಾಲಿಕೆ ಕಚೇರಿ ಎದುರು ಗೋಲಿಯಾಡುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಜಗನ್ನಾಥ ಎಸ್. ಸೂರ್ಯವಂಶಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೀನದಯಾಳ ಅಂತ್ಯೋದಯ ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಮೀಸಲಿಟ್ಟ ₹ 50 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಸೌಕರ್ಯ ಒದಗಿಸಬೇಕು’ ಎಂದು ಹೇಳಿದರು.
‘ನಗರದಲ್ಲಿ ಸುಮಾರು 700 ಜನ ಬೀದಿಬದಿ ವ್ಯಾಪಾರಿಗಳಿದ್ದು, ಕಲಬುರಗಿ ಸೂಪರ್ ಮಾರುಕಟ್ಟೆ, ಚೌಪಟ್ಟಿ, ಹಳೇ ಜೈಲ್ ಸಮೀಪ ಈಗಾಗಲೇ ಪಾಲಿಕೆ ವತಿಯಿಂದ 250 ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಜಾಗ ಗುರುತಿಸಿದೆ. ಇನ್ನೂ ಉಳಿದವರಿಗೆ ಜಾಗ ಗುರುತಿಸಿ ಸೌಕರ್ಯ ನೀಡಬೇಕು. ಹಿಂದೆ ಗುರುತಿಸಿದ ಜಾಗಗಳಲ್ಲಿ ಸೌಕರ್ಯ ಇಲ್ಲದಿರುವುದರಿಂದ ಅಲ್ಲಿ ಯಾರೂ ಹೋಗುತ್ತಿಲ್ಲ. ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದರು.
‘ಕಣ್ಣಿ ಮಾರುಕಟ್ಟೆ, ಕೆಎಂಎಫ್ ಡೇರಿ, ರಾಮಮಂದಿರ, ಶಹಾಬಜಾರ್, ಖರ್ಗೆ ಪೆಟ್ರೋಲ್ ಪಂಪ್ ಪ್ರದೇಶದಲ್ಲಿ ಒಟ್ಟು ಮಹಾನಗರ ಪಾಲಿಕೆಯ ಆಯುಕ್ತರು 7 ಝೋನಲ್‌ಗಳನ್ನು ಪ್ರಾರಂಭಿಸಿ ಅಲ್ಲಿ ಸೌಕರ್ಯ ಒದಗಿಸಲು ಅನುಕೂಲ ಮಾಡಿಕೊಡಬೇಕಿತ್ತು ಅದು ಸಹ ಅಧಿಕಾರಿಗಳು ಸಹ ಮಾಡಿಲ್ಲ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿನ್ ಫರಹತಾಬಾದ್, ಅಶೋಕರೆಡ್ಡಿ, ಚಂದ್ರಹಾಸ್ ಜಿತ್ರೆ, ಮಂಜುನಾಥ್ ನಾಲವಾರಕರ್, ವೆಂಕಟೇಶ್ ಕಾಂಬಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.