ಕಲಬುರಗಿ: ‘ಗುಲಬರ್ಗಾ ದೂರದರ್ಶನ ಕೇಂದ್ರ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಎಚ್ಚರಿಕೆ ನೀಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1977ರ ಸೆ.3ರಂದು ಗುಲಬರ್ಗಾದಲ್ಲಿ ದೂರದರ್ಶನ ಕೇಂದ್ರ ಆರಂಭವಾಯಿತು. ಇದು ಈ ಭಾಗದ ಜನರಿಗೆ ಅಸ್ಮಿತೆಯ ವಿಷಯವಾಗಿದೆ. ಈ ಕೇಂದ್ರದಿಂದ ಕಲಾವಿದರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಜ್ಞಾನಿಗಳಿಗೆ ಅನುಕೂಲವಾಗಿತ್ತು’ ಎಂದರು.
‘2022ರಲ್ಲಿ ದೇಶದಲ್ಲಿ ಹಳೆ ದೂರದರ್ಶನ ಕೇಂದ್ರಗಳನ್ನು ಮುಚ್ಚುವ ಪ್ರಯತ್ನ ಆರಂಭವಾಯಿತು. ಈ ಪ್ರಯತ್ನದ ಭಾಗವಾಗಿ ಈ ಕೇಂದ್ರದ ಅಗತ್ಯತೆ ಕುರಿತು ತಿಳಿದುಕೊಳ್ಳಲು ಪ್ರಸಾರ ಭಾರತಿಯ ನಿರ್ದೇಶಕರು ಗುಲಬರ್ಗಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇಂದ್ರವನ್ನು ಮುಚ್ಚದಂತೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರವನ್ನು ಮುಚ್ಚುವುದಿಲ್ಲ. ಡಿಜಿಟಲೀಕರಣಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದ್ದರು’ ಎಂದು ತಿಳಿಸಿದರು.
‘ಪ್ರಾರಂಭದಲ್ಲಿ ಗುಲಬರ್ಗಾ ದೂರದರ್ಶನ ಕೇಂದ್ರದಲ್ಲಿ 91 ಸಿಬ್ಬಂದಿ ಮತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಬಳಿಕ 2021ರಲ್ಲಿ ಇಲ್ಲಿನ ಖಾಲಿ ಹುದ್ದೆಗಳನ್ನು ತುಂಬಲಿಲ್ಲ. ಇದ್ದ ಸಿಬ್ಬಂದಿಯನ್ನೂ ಬೇರೆಡೆ ವರ್ಗಾವಣೆ ಮಾಡಲಾಯಿತು. ಯಂತ್ರೋಪಕರಣಗಳನ್ನೂ ಸಾಗಿಸಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಈ ಭಾಗದ ದಾಖಲೆ ಅಳಿಸುವ ಕೆಲಸಕ್ಕೆ ಕೈಹಾಕಿತು. ಇದನ್ನು ಕೈಬಿಡಬೇಕು. ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಗಿರೀಶ ಕಡ್ಲೆವಾಡ, ಲಿಂಗರಾಜ ಶಿರಗಾಪುರ, ಭಾನುಕುಮಾರ, ಶಿವಾನಂದ ಅಣಜಗಿ ಸೇರಿ ಹಲವರು ಇದ್ದರು.
‘ದೂರದರ್ಶನ ಕೇಂದ್ರ ಅಭಿಮಾನದ ಸಂಗತಿ’
‘ಕವಿರಾಜಮಾರ್ಗ ಹಾಗೂ ದೂರದರ್ಶನ ಈ ಭಾಗದ ಅಭಿಮಾನದ ಸಂಗತಿಗಳಾಗಿವೆ’ ಎಂದು ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.
‘1977ರಲ್ಲಿ ದೂರದರ್ಶನ ಕೇಂದ್ರ ಆರಂಭವಾದಾಗ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಲ್ಲಿಯೇ ಚಿತ್ರೀಕರಣ ಮಾಡುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಬಳಿಕ ಇಲ್ಲಿಯೇ ಚಿತ್ರೀಕರಣ ಮಾಡಲು ಆರಂಭಿಸಿದರು. ಬಳಿಕ ಈ ಭಾಗದ ಅನೇಕ ಸಂಗತಿಗಳಿಗೂ ಮಹತ್ವ ಬಂದಿತು’ ಎಂದರು.
‘ದೂರದರ್ಶನ ಕೇಂದ್ರ ಈ ಭಾಗದ ಪ್ರಮುಖ ಸರ್ಕಾರಿ ಆಸ್ತಿಯಾಗಿದೆ. 2027ಕ್ಕೆ ಇದಕ್ಕೆ 50 ವರ್ಷ ತುಂಬಲಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಮುಚ್ಚುವ ಕಾರ್ಯ ಒಳ್ಳೆಯದಲ್ಲ. ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.